ಮಾಂಸಾಹಾರ ಸೇವನೆ ಕೆಟ್ಟ ದಾರಿಯಲ್ಲಿ ನಡೆಸುತ್ತದೆ- ಆರ್ ಎಸ್ ಎಸ್ ವರಿಷ್ಠ ಮೋಹನ್ ಭಾಗವತ್

ನಾಗಪುರ, ಅ.1: ಜೀವಿಗಳನ್ನು ಕೊಂದು ತಿನ್ನುವುದು ಒಳ್ಳೆಯ ಪದ್ಧತಿ ಅಲ್ಲ,ಅದು ಕೆಟ್ಟ ದಾರಿ ಹಿಡಿಯುವಂತೆ ಮಾಡುತ್ತದೆ ಎಂದು ಆರ್.ಎಸ್.ಎಸ್ ವರಿಷ್ಠ ಮೋಹನ್ ಭಾಗವತ್ ಅವರು ಹೇಳಿದ್ದಾರೆ.

ಭಾರತ್ ವಿಕಾಸ್ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಯ ಬಗ್ಗೆ ಮಾತನಾಡುತ್ತ ಮಾಂಸಾಹಾರ ಸೇವನೆಯನ್ನು ಪರೋಕ್ಷವಾಗಿ ಟೀಕಿಸಿದ ಅವರು, ಕೆಟ್ಟ ಆಹಾರ ಸೇವನೆ (ಮಾಂಸಹಾರ) ಹಾಗೂ ಜೀವಿಗಳನ್ನು ಕೊಂದು ತಿನ್ನುವುದು ಒಳ್ಳೆಯ ಪದ್ಧತಿ ಅಲ್ಲ. ನೀವು ಕೆಟ್ಟ ಆಹಾರ ತಿಂದರೆ, ಅದು ನಿಮ್ಮನ್ನು ಕೆಟ್ಟ ದಾರಿಯಲ್ಲಿ ನಡೆಸುತ್ತದೆ. ಆದುದರಿಂದ ತಾಮಸ ಆಹಾರವನ್ನು ತಿನ್ನಬಾರದು. ಅತಿಯಾದ ಹಿಂಸೆಯನ್ನು ಒಳಗೊಂಡ ಆಹಾರವನ್ನು ತಿನ್ನಬಾರದು. ತಾಮಸ ಆಹಾರ ಮಾಂಸಹಾರವನ್ನು ಒಳಗೊಂಡಿದೆ ಎಂದು ಹೇಳಿದರು.

ಈ ವೇಳೆ ಪಾಶ್ಚಿಮಾತ್ಯ ದೇಶಗಳು ಹಾಗೂ ಭಾರತದಲ್ಲಿರುವ ಮಾಂಸಾಹಾರ ಸೇವಿಸುವವರನ್ನು ಹೋಲಿಕೆ ಮಾಡಿದ ಅವರು, ಜಗತ್ತಿನ ಇತರೆಡೆಯಂತೆ ಭಾರತದಲ್ಲಿ ಕೂಡ ಮಾಸಾಹಾರ ಸೇವಿಸುವ ಜನರಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಮಾಂಸಹಾರಿಗಳು ಕೂಡ ಸಂಯಮವನ್ನು ಹಾಗೂ ನಿರ್ದಿಷ್ಟ ನಿಯಮಗಳನ್ನು ಅನುಸರಿಸುತ್ತಾರೆ. ಇಲ್ಲಿ ಮಾಂಸಹಾರ ಸೇವನೆ ಮಾಡುವ ಜನರು ಶ್ರಾವಣ ಮಾಸ ಪೂರ್ತಿ ಮಾಂಸಹಾರ ತ್ಯಜಿಸುತ್ತಾರೆ. ಸೋಮವಾರ, ಮಂಗಳವಾರ, ಗುರುವಾರ ಅಥವಾ ಶನಿವಾರ ಮಾಂಸಾಹಾರ ಸೇವಿಸುವುದಿಲ್ಲ. ಅವರು ತಮಗೆ ತಾವೇ ಕೆಲವು ನಿಯಮಗಳನ್ನು ವಿಧಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!