ಶಾಸಕ, ಸಂಸದರ ವೈಫಲ್ಯ ಎತ್ತಿ ತೋರಿಸಿದ್ದು ಬಿಜೆಪಿಗರಿಗೆ ಇರುವೆ ಬಿಟ್ಟಂತಾಗಿದೆ- ದೀಪಕ್ ಕೋಟ್ಯಾನ್
ಉಡುಪಿ: ಜಿಲ್ಲೆಯ ಶಾಸಕ, ಸಂಸದರ ವೈಫಲ್ಯವನ್ನು ಕಾಂಗ್ರೆಸ್ ನಾಯಕ ಮಿಥುನ್ ರೈ ಎತ್ತಿ ತೋರಿಸಿದ್ದು ಬಿಜೆಪಿಗರಿಗೆ ಇರುವೆ ಬಿಟ್ಟಂತಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿದ್ದರೂ ಕೂಡ ಕ್ಷೇತ್ರದತ್ತ ತಲೆಹಾಕಿಯೂ ಬರದ ಸಂಸದೆ ಶೋಭಾಕರಂದ್ಲಾಜೆ ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತೋರಿದ್ದರು. ರಸ್ತೆಯ ಎಲ್ಲಾ ರಸ್ತೆಗಳು ಹೊಂಡಳಿಂದ ಕೂಡಿ ಕೆಲವು ಜೀವಗಳು ಬಲಿಯಾದಾಗ ಬಿಜೆಪಿಗರಿಗೆ ಯಾವುದೇ ರೀತಿಯ ಕಾಳಜಿ ಇರಲಿಲ್ಲ. ಒಂದು ರಾಷ್ಟ್ರೀಯ ಪಕ್ಷವಾಗಿ ರಸ್ತೆಯ ಸಮಸ್ಯೆಯನ್ನು ಜನರ ಮುಂದಿಡಲು ಹೋದಾಗ ಸಂಸದೆಯ ಬಗ್ಗೆ ವಿಪರೀತ ಕಾಳಜಿ ತೋರಿಸುತ್ತಿದ್ದಾರೆ. ಅದೇ ಸಂಸದೆಯ ವಿರುದ್ದ ಬಿಜೆಪಿಗರು ಗೋಬ್ಯಾಕ್ ಅಭಿಯಾನ ಮಾಡಿರುವುದನ್ನು ಮಾತ್ರ ಮರೆತಂತೆ ಕಾಣುತ್ತಿದೆ.
ಬಿಜೆಪಿಗರಿಗೆ ಅವರ ಆಡಳಿತದಲ್ಲಿ ನಡೆದ ವೈಫಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಮಾಡಿದಾಗ ಅಂತಹವರ ವಿರುದ್ದ ವೈಯುಕ್ತಿಕ ಟೀಕೆ ಮಾಡುವುದೇ ಬಿಜೆಪಿಗರ ಚಾಳಿಯಾಗಿದೆ. ಜನರ ಸಮಸ್ಯೆಗೆ ಸ್ಪಂದಿಸುವುದನ್ನು ಬಿಟ್ಟು ಬರೇ ಕಮೀಷನ್ ದಂಧೆಯಲ್ಲಿ ಮುಳುಗಿರುವ ಬಿಜೆಪಿಗರಿಗೆ ಯಾವುದೇ ರೀತಿಯ ಅಭಿವೃದ್ಧಿ ಬೇಕಾಗಿಲ್ಲ. ಚುನಾವಣೆಯಲ್ಲಿ ಸೋತರೂ ಕೂಡ ಮಿಥುನ್ ರೈ ಜನರೊಂದಿಗೆ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದರೆ ಬಿಜೆಪಿಗರು ಬರೀ ವೈಯುಕ್ತಿಕ ಪ್ರಚಾರವನ್ನು ಪಡೆದುಕೊಂಡು ತಮ್ಮ ಕಿಸೆಗಳನ್ನು ತುಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಸಂಸದೆಯಾಗಿ ಆಯ್ಕೆಯಾದ ಶೋಭಾ ಕರಂದ್ಲಾಜೆ ಎಷ್ಟು ಬಾರಿ ತನ್ನ ಕ್ಷೇತ್ರಕ್ಕೆ ಬಂದು ತನ್ನ ಮತದಾರರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಬಿಜೆಪಿಗರು ಮೊದಲು ಮಾಡಲಿ ಬಳಿಕ ಮಿಥುನ್ ರೈ ವಿರುದ್ದ ಅವಹೇಳನ ಮಾಡಲುವ ಕೆಲಸ ನಡೆಸಲಿ. ಹೀಗೆಯೇ ಸಂಸದೆ ತಮ್ಮ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದಲ್ಲಿ ಯುವ ಕಾಂಗ್ರೆಸ್ ತನ್ನ ಪ್ರತಿಭಟನೆ ಮುಂದುವರೆಸಲಿದೆ ಎಂದು ಅವರು ಹೇಳಿದ್ದಾರೆ.