ಉಡುಪಿಯ ಶಾಸಕರೇ ರಸ್ತೆ ದುರಸ್ತಿ ಯಾಕಿಲ್ಲ..? 40% ಕಮಿಷನ್ ಸಿಕ್ಕಿಲ್ಲವೇ- ಮಿಥುನ್ ರೈ
ಉಡುಪಿ: ಸಂಪೂರ್ಣ ಹದಗೆಟ್ಟಿರುವ ಮಲ್ಪೆಯಿಂದ ಪರ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಗೊಳಿಸುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಆದಿಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ, ಉಡುಪಿ ಶಾಸಕ ರಘುಪತಿ ಭಟ್ ರಸ್ತೆ ದುರಸ್ತಿ ಮಾಡುತ್ತೇನೆ ಎನ್ನುತ್ತಾರೆ. ಆದರೆ ರಸ್ತೆ ದುರಸ್ತಿ ಮಾಡುತ್ತಿಲ್ಲ. ಅವರು ಯಾಕೆ ಮಾಡುತ್ತಿಲ್ಲ ಎಂದರೆ ಅವರಿಗೆ 40 ಪರ್ಸೆಂಟ್ ಕಮಿಷನ್ ಸಿಕ್ಕಿಲ್ಲ. ಆ ಕಾರಣಕ್ಕೆ ಮಾಡುತ್ತಿಲ್ಲ ಎಂದು ಟೀಕಿಸಿದರು.
ಡೋಲು, ಗರ್ನಲ್ ತಂದದ್ದು ಜನರನ್ನು ಎಬ್ಬಿಸಲು ಅಲ್ಲ, ಮಲಗಿರುವ ರಘುಪತಿ ಭಟ್ ಅವರನ್ನು ಎಬ್ಬಿಸಲು ಈ ಪ್ರತಿಭಟನೆ. ಅವರ ರಾತ್ರಿ ವ್ಯವಹಾರ ಜೋರಿದೆ. ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಒಬ್ಬರೆ ಹಣ ಲೆಕ್ಕ ಹಾಕುತ್ತ ರಾತ್ರಿ ಕಳೆಯುತ್ತಿದ್ದಾರೆ. ಅವರನ್ನು ಎಬ್ಬಿಸಲು ಬಂದಿದ್ದೇವೆ. ಕಾನೂನು ಬಾಹಿರ ಚಟುವಟಿಕೆ ಮಾಡುವುದು ಬೇಡ, ಕಾನೂನಿಗೆ ಪೂರಕವಾದ ಕೆಲಸ ಮಾಡಿಯೆಂದು ಟಾಂಗ್ ನೀಡಿದರು.
ಉಡುಪಿ ಜಿಲ್ಲೆಯ ಶೋಭಾ ಅಕ್ಕ ಕಾಣೆಯಾಗಿದ್ದಾರೆ. ಅವರನ್ನು ವಾರದೊಳಗೆ ಪತ್ತೆ ಮಾಡಿ ಪೋಟೊ ಕಳುಹಿಸುವ ಮೊದಲ 5 ಮಂದಿಗೆ ತಲಾ 5 ಸಾವಿರ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು. ಬಳಿಕವೂ ಪತ್ತೆಯಾಗದಿದ್ದರೆ, ಉಡುಪಿ ಜಿಲ್ಲೆಯ ಪ್ರತಿ ಠಾಣೆಯಲ್ಲಿ ಸಂಸದೆ ನಾಪತ್ತೆಯಾಗಿದ್ದಾರೆ ದೂರು ದಾಖಲಿಸಿ, ಅವರ ಭಾವಚಿತ್ರವನ್ನು ಬೀದಿ ಬೀದಿಗಳಲ್ಲಿ ಆಂಟಿಸುತ್ತೇವೆ ಎಂದು ಹೇಳಿದರು.
ಉಡುಪಿಗೆ ಶೋಭಾಕ್ಕ, ದಕ್ಷಿಣ ಕನ್ನಡಕ್ಕೆ ನಳಿನ್ ಅಣ್ಣ ಈ ಇಬ್ಬರು ಇರುವ ತನಕವೂ ಕ್ಷೇತ್ರ ಉದ್ಧಾರ ಆಗಲ್ಲ. ರಾಜ್ಯ ಬಿಜೆಪಿ ಸರಕಾರ ನಿದ್ರೆಯ ಮಂಪರಿನಲ್ಲಿದೆ. ಘೋರ ನಿದ್ರೆಯಲ್ಲಿರುವ ಶಾಸಕ ರಘುಪತಿ ಭಟ್ ಮಣಿಪಾಲದಲ್ಲಿ ರಾತ್ರಿ ದುಡ್ಡು ಎಣಿಸುವುದರಲ್ಲಿ ಬ್ಯುಸಿ. ಗುತ್ತಿಗೆದಾರರು ಭಟ್‌ರಿಗೆ, ಶೋಭಾಕ್ಕನಿಗೆ ಶೇ.40 ಕಮಿಷನ್ ಕೊಟ್ಟಿಲ್ಲ ಅಂತಾನೇ ರಸ್ತೆ ದುರಸ್ತಿಗೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಅಮೃತ್ ಶೆಣೈ, ಬಿ.ನರಸಿಂಹ ಮೂರ್ತಿ, ಯತೀಶ್ ಕರ್ಕೇರ, ಉದ್ಯಾವರ ನಾಗೇಶ್ ಕುಮಾರ್, ಆನಂದಿ, ಅಣ್ಣಯ್ಯ ಶೇರಿಗಾರ್, ಪ್ರಶಾಂತ್ ಜತ್ತನ್ನ, ಮೀನಾಕ್ಷಿ ಮಾಧವ ಬನ್ನಂಜೆ, ಫಾ.ವಿಲಿಯಂ ಮಾರ್ಟಿಸ್, ಗಣೇಶ್ ನೆರ್ಗಿ, ವೆರೆನಿಕಾ ಕರ್ನೇಲಿಯೋ, ಡಾ.ಸುನೀತಾ ಶೆಟ್ಟಿ, ರೋಶನಿ ಒಲಿವೆರಾ, ದಿನೇಶ್ ಪುತ್ರನ್, ಬಿ.ಕುಶಲ ಶೆಟ್ಟಿ, ಸುರಯ್ಯ ಅಂಜಮ್, ಲೂವಿಸ್ ಲೋಬೊ, ಸುಂದರ್ ಮಾಸ್ಟರ್, ನಾರಾಯಣ ಕುಂದರ್ ಉಪಸ್ಥಿತರಿದ್ದರು.