ಉಡುಪಿ : ಪ್ರವಾಸೋದ್ಯಮ ಅಭಿವೃದ್ಧಿಗೆ ನಿಯಮಗಳ ಸರಳೀಕರಣ ಅನುಕೂಲ: ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ, ಸೆ.27 : ಪ್ರವಾಸೋದ್ಯಮ ಅಭಿವೃದ್ಧಿಗೆ ನಿಯಮಗಳ ಸರಳೀಕರಣ ಅನುಕೂಲವಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಹೇಳಿದ್ದಾರೆ.

ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕರಾವಳಿ ಪ್ರವಾ ಸೋದ್ಯಮ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಿಂದ ಮಲ್ಪೆಯವರೆಗೆ ಆಯೋಜಿಸಲಾಗಿದ್ದ ಬೈಕ್ ರ್ಯಾಲಿ ಗೆ ಚಾಲನೆ ನೀಡಿ ಮಾತನಾಡಿದ ಅವರು, ನಿಯಮಗಳ ಸರಳೀಕರಣದಿಂದ ಪ್ರವಾಸೋದ್ಯಮ ಅಭಿವೃದ್ದಿಗೆ ಸಾಕಷ್ಟು ಅನುಕೂಲವಾಗುತ್ತದೆ. ಸಿಆರ್‍ಝೆಡ್ ನಿಯಮಗಳಲ್ಲಿ ಈಗಾಗಲೇ ವಿನಾಯತಿ ದೊರೆತಿದ್ದು, ಹೋಂ ಸ್ಟೇಗಳಿಗೆ ಅನುಮತಿ ನೀಡುವ ವಿಧಾನವನ್ನು ಆನ್ ಲೈನ್ ಮೂಲಕ ಸರಳೀಕರಣಗೊಳಿಸಲು ಚಿಂತಿಸಲಾಗಿದೆ. ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಲು ಎಲ್ಲಾ ವಿಧದ ಮಾಧ್ಯಮಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಪ್ರವಾಸೋದ್ಯಮ ಇಲಾಖೆಯ ಇನ್ಸ್ಟಾಗ್ರಾಂ ಗೆ ಸಹ ಚಾಲನೆ ನೀಡಲಾಗಿದೆ. ಜಿಲ್ಲೆಯ ಎಲ್ಲರ ಸಹಕಾರದಿಂದ ಪ್ರವಾಸೋದ್ಯಮವನ್ನು ಅಭಿವೃದ್ದಿಗೊಳಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ರ್ಯಾಲಿಗೆ ಚಾಲನೆ ನೀಡಿದ ಉಡುಪಿ ಶಾಸಕ ರಘುಪತಿ ಭಟ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿತಾಣ ಗಳನ್ನು ಹೊರತು ಪಡಿಸಿ ಬೆಳಕಿಗೆ ಬಾರದ ಇನ್ನೂ ಅನೇಕ ತೆರೆಮರೆಯಲ್ಲಿರುವ ಅತ್ಯುತ್ತಮ ಪ್ರವಾಸಿ ತಾಣಗಳಿದ್ದು ಇವುಗಳ ಬಗ್ಗೆ ಪ್ರವಾಸಿಗರಿಗೆ ಅರಿವು ಮೂಡಿಸುವ ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ಮತ್ತಷ್ಟು ಅಭಿವೃಧ್ದಿಗೊಳಿಸಬೇಕಾಗಿದೆ ಎಂದರು. ಹಾಗೂ ಜಿಲ್ಲೆಯಲ್ಲಿ ಶ್ರೀಕೃಷ್ಣ ಮಠ, ಮಲ್ಪೆಬೀಚ್, ಸೈಂಟ್ ಮೇರಿಸ್ ದ್ವೀಪದಂತಹ ಪ್ರಮುಖ ಪ್ರಸಿದ್ದ ಪ್ರವಾಸಿತಾಣಗಳ ಹೊರತಾಗಿಯೂ ಸೂರಾಲು ಮಣ್ಣಿನ ಅರಮನೆ ಸೇರಿದಂತೆ ಇನ್ನೂ ಅನೇಕ ಪ್ರವಾಸಿ ಸ್ಥಳಗಳಿದ್ದು ಅವುಗಳ ಅಭಿವೃಧಿಯ ಬಗ್ಗೆಯೂ ಸಹ ಹೆಚ್ಚಿನ ಗಮನಹರಿಸಿ ಪ್ರವಾಸಿಗರಿಗೆ ಅವುಗಳನ್ನು ಪರಿಚಯಿಸ ಬೇಕಾಗಿದೆ. ಮಣಿಪಾಲದ ಮಣ್ಣಪಳ್ಳ ಕೆರೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಸಿ.ಆರ್.ಝೆಡ್ ನಿಯಮಗಳಲ್ಲೂ ಸಹ ರಿಯಾಯತಿ ದೊರೆತಿದೆ ಎಂದು ಅವರು ಹೇಳಿದರು.

ಇದೇ ವೇಳೆ ಅವರು, ಉಡುಪಿ ಜಿಲ್ಲೆಯ ರಜತ ಮಹೋತ್ಸದ ಪ್ರಯುಕ್ತ ಜಿಲ್ಲೆಯ ಅಭಿವದ್ಧಿ, ಪ್ರವಾಸಿ ತಾಣಗಳ ಬಗ್ಗೆ ರಾಜ್ಯಾದ್ಯಂತ ಪ್ರಚಾರ ಪಡಿಸಲು ಎಲ್.ಇ.ಡಿ.ಯ ವಿಶೇಷ ರಥವನ್ನು ಸಿದ್ದಪಡಿಸಲಾಗುತ್ತಿದ್ದು ಈ ರಥವು ನವೆಂಬರ್, ಡಿಸೆಂಬರ್ ನಲ್ಲಿ ರಾಜ್ಯಾದ್ಯಂತ ಸಂಚರಿಸಿ, ಜನವರಿ ತಿಂಗಳಲ್ಲಿ ಜಿಲ್ಲೆಗೆ ವಾಪಾಸ್ಸು ಬರಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!