ಕರಾವಳಿಯಲ್ಲಿ ಮತ್ಸ್ಯ ಗ್ರಾಮ ನಿರ್ಮಾಣಕ್ಕೆ ಕ್ರಮ- ಮಟ್ಟಾರು ರತ್ನಾಕರ ಹೆಗ್ಡೆ

ಮಂಗಳೂರು, ಸೆ.26: ಇಲ್ಲಿಗೆ ಹತ್ತಿರದ ಸಸಿಹಿತ್ಲು, ಉಡುಪಿ ಜಿಲ್ಲೆಯ ಮಲ್ಪೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ ಸಮಗ್ರ ಅನುಕೂಲತೆಗಳುಳ್ಳ ಮತ್ಸ್ಯ ಗ್ರಾಮ ನಿರ್ಮಾಣಕ್ಕೆ ಪೂರ್ವ ಭಾವಿಸಿದ್ದತಾ ಸಭೆಗಳನ್ನು ನಡೆಸಲಾಗಿದ್ದು, ಸದ್ಯದಲ್ಲೇ ಸಸಿಹಿತ್ಲು ಗ್ರಾಮದಲ್ಲಿ 5 ಎಕರೆ ಸ್ಥಳ ಲಭ್ಯವಾಗುವ ಸಾಧ್ಯತೆ ಇದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗಡೆ ಅವರು ತಿಳಿಸಿದರು.

ಅವರು ಸೆ. 26ರ ಸೋಮವಾರ ನಗರದ ಉರ್ವಾ ಸ್ಟೋರ್ಸ್ ಹತ್ತಿರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಅನುಷ್ಠಾನ ಕುರಿತು ಹಮ್ಮಿಕೊಂಡ ಸಂವಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮತ್ಸ್ಯ ಸಂಬಂಧಿತ ಸಮಗ್ರ ಚಟುವಟಿಕೆಗಳ ಅಭಿವೃದ್ಧಿಗಾಗಿ ಈ ಗ್ರಾಮಗಳಲ್ಲಿ ತಾಜಾ ಮೀನುಗಳ ಸಂಗ್ರಹ, ಮೀನು ಮಾರಾಟ, ಒಣಗಿಸುವ ಪ್ರಕ್ರಿಯೆ, ಫುಡ್ ಪಾರ್ಕ್, ಹೋಟೆಲ್, ವಿಶ್ರಾಂತಿ ಹಾಗೂ ಅತಿಥಿ ಗೃಹಗಳ ನಿರ್ಮಾಣ ಸೇರಿದಂತೆ ಸಮಗ್ರವಾಗಿ ಎಲ್ಲಾ ಚಟುವಟಿಕೆಗಳನ್ನು ಕೈಗೊಳ್ಳುವ ಗ್ರಾಮವಾಗಿ ಅವುಗಳನ್ನು ಅಭಿವೃದ್ಧಿ ಪಡಿಸಲಾಗುವುದು, ಮತ್ಸ್ಯ ಗ್ರಾಮಕ್ಕೆ 7.5 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ಲಭ್ಯವಾಗಲಿದೆ, ಅದಕ್ಕಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಮಿತಿಯು ರಚನೆಯಾಗಿದ್ದು ಮಲ್ಪೆ ಹಾಗೂ ಹೊನ್ನಾವರದಲ್ಲಿ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ ಎಂದು ಅವರು ತಿಳಿಸಿದರು.

ಅದೇ ರೀತಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಸಹಾಯ ಸಂಘದ ಮಹಿಳೆಯರಿಗೆ ಮೀನು ಮಾರಾಟ ವಾಹನ ನೀಡಲು ಅನುಕೂಲವಾಗುವಂತೆ  ವಾಹನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಪ್ರಾರಂಭದಲ್ಲಿ ಮೂರು ವಾಹನಗಳನ್ನು ನೀಡುವ ಕುರಿತು ಚಿಂತಿಸಲಾಗುತ್ತಿದೆ ಎಂದ ಅವರು,

ಮೀನಿನ ತ್ಯಾಜ್ಯವನ್ನು ಗೊಬ್ಬರ ಮಾಡಿ ಮಾರಾಟ ಮಾಡಲಾಗುತ್ತದೆ ಹಾಗೂ ಅದರ ತ್ಯಾಜ್ಯದಿಂದ ಅನಿಲ ಉತ್ಪತ್ತಿ ಮಾಡುವ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಬಹಳಷ್ಟು ಕೆಲಸಗಳಾಗುತ್ತಿದ್ದು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅವರು ಕೋರಿದರು.

ಮೀನುಗಾರಿಕೆ ಇಲಾಖೆಯ ನಿರ್ದೇಶಕ ರಾಮಾಚಾರ್ಯ ಹಾಗೂ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಮಾತನಾಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜಾ ಪ್ರಸ್ತಾವಿಕವಾಗಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಹರೀಶ್, ಉಡುಪಿ ಜಿಲ್ಲೆಯ ಜಂಟಿ ನಿರ್ದೇಶಕ ಗಣೇಶ್, ಬಂದರು ವಿಭಾಗದ ಅಧಿಕಾರಿಗಳು, ತಜ್ಞರಾದ ರಾಮಚಂದ್ರ ಭಟ್ಟರು ಅಧಿಕಾರಿಗಳು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕಾ ಸಂಘಗಳ ಪದಾಧಿಕಾರಿಗಳು, ಮಹಿಳಾ ಸಂಘದ ಸದಸ್ಯರು ಹಾಗೂ ಸಂಬಂಧಿಸಿದವರು ಸಭೆಯಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಮೀನುಗಾರಿಕಾ ಸಂಘಗಳ ಸದಸ್ಯರು ಸಮಸ್ಯೆಗಳನ್ನು ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!