ರಾಜಸ್ಥಾನ ಕಾಂಗ್ರೆಸ್’ನಲ್ಲಿ ಬಿಕ್ಕಟ್ಟು- ಗೆಹಲೋತ್, ಪೈಲಟ್‌ಗೆ ಹೈಕಮಾಂಡ್ ಬುಲಾವ್

‌ನವದೆಹಲಿ: ನಾಯಕತ್ವಕ್ಕೆ ಸಂಬಂಧಿಸಿದಂತೆ ರಾಜಸ್ಥಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್‌ನ ಹೈಕಮಾಂಡ್‌ ಅಸಮಾಧಾನಗೊಂಡಿದೆ. ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಮತ್ತು ಸಚಿನ್‌ ಪೈಲಟ್‌ ಅವರನ್ನು ದೆಹಲಿಗೆ ಬರುವಂತೆ ಪಕ್ಷ ಸೂಚಿಸಿದೆ.

ಒಂದು ವೇಳೆ ಗೆಹಲೋತ್‌ ಎಐಸಿಸಿ ಅಧ್ಯಕ್ಷರಾದರೆ, ಅವರಿಂದ ತೆರವಾಗುವ ಮುಖ್ಯಮಂತ್ರಿ ಸ್ಥಾನಕ್ಕೆ ಸಚಿನ್‌ ಪೈಲಟ್‌ ಅವರನ್ನು ನಿಯೋಜಿಸಲಾಗುತ್ತದೆ ಎಂಬ ಕಾರಣಕ್ಕೆ ಗೆಹಲೋತ್‌ ಬೆಂಬಲಿಗರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. ಕೆಲವರು ಸ್ಪೀಕರ್‌ ಅವರನ್ನು ಭೇಟಿಯಾಗಿ ರಾಜೀನಾಮೆಯನ್ನೂ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಬೆಳವಣಿಗೆ ಕಾಂಗ್ರೆಸ್‌ಗೆ ಮುಜುಗರ ಸೃಷ್ಟಿ ಮಾಡಿದೆ.

‘ನನ್ನ ಕೈಯಲ್ಲಿ ಏನೂ ಇಲ್ಲ. ಎಲ್ಲವನ್ನೂ ಶಾಸಕರು ನಿರ್ಧರಿಸುತ್ತಾರೆ’ ಎಂದು ಗೆಹಲೋತ್‌ ಅವರು ಪಕ್ಷದ ಹೈಕಮಾಂಡ್‌ಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಸಚಿವ ಶಾಂತಿ ಧರಿವಾಲ್ ಅವರ ನಿವಾಸದಲ್ಲಿ ಸಭೆ ಸೇರಿದ್ದ ಗೆಹಲೋತ್‌ ನಿಷ್ಠ 80ಕ್ಕೂ ಹೆಚ್ಚು ಶಾಸಕರು, ಪೈಲಟ್ ಅವರನ್ನು ಸಿಎಂ ರೇಸ್‌ನಿಂದ ಹೊರದಬ್ಬುವ ಮತ್ತು ಹೊಸ ನಾಯಕನನ್ನು ಆಯ್ಕೆ ಮಾಡುವ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು.

‘92 ಶಾಸಕರು ಒಟ್ಟಾಗಿದ್ದೇವೆ. ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ. ನಮ್ಮ ನಾಯಕನನ್ನು ಆಯ್ಕೆ ಮಾಡಲು ನಮಗೆ ಎಲ್ಲಾ ಹಕ್ಕಿದೆ. ನಮ್ಮ ನಾಯಕನನ್ನು ನಾವೇ ನಿರ್ಧರಿಸುತ್ತೇವೆ’ ಎಂದು ಸಚಿವ ಪ್ರತಾಪ್ ಖಚ್ರಿಯಾವಾಸ್ ಹೇಳಿದ್ದಾರೆ.

ಈ ಶಾಸಕರು ವಿಧಾನಸಭೆ ಸ್ಪೀಕರ್ ಸಿ.ಪಿ. ಜೋಶಿ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!