ತಿರುಪತಿ ದರ್ಶನ ಮಾಡಬೇಕೆಂದಿರುವ ಭಕ್ತರಿಗೆ ಗುಡ್ ನ್ಯೂಸ್…

ಹೈದರಾಬಾದ್: ಸಾಮಾನ್ಯ ಯಾತ್ರಿಗಳಿಗೆ ವೆಂಕಟೇಶ್ವರ ದೇವರ ದರ್ಶನ ಸುಲಭವಾಗಿ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ತಿರುಪತಿ ತಿರುಮಲ ದೇವಸ್ಥಾನ ವಿಶ್ವಸ್ಥ ಮಂಡಳಿ (ಟಿಟಿಡಿ), ದರ್ಶನಕ್ಕೆ ಸಂಬಂಧಿಸಿದ ವ್ಯವಸ್ಥೆ ಹಾಗೂ ಸಮಯದಲ್ಲಿ ಹಲವು ಬದಲಾವಣೆ ಗಳನ್ನು ಮಾಡಿದೆ.

ಯಾತ್ರಿಗಳಿಗೆ ವಸತಿ ಸೌಲಭ್ಯವನ್ನು ಹಂಚಿಕೆ ಮಾಡುವ ವ್ಯವಸ್ಥೆಯನ್ನು ತಿರುಮಲದಿಂದ ತಿರುಪತಿಗೆ ಸ್ಥಳಾಂತರಿಸಲು ಟಿಟಿಡಿ ನಿರ್ಧರಿಸಿದೆ. ತಿರುಮಲದಲ್ಲಿ ಶನಿವಾರ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಗಣ್ಯರಿಗಾಗಿ ಜಾರಿಯಲ್ಲಿದ್ದ ದರ್ಶನದ ಸಮಯವನ್ನು ಬೆಳಿಗ್ಗೆ 5.30ರ ಬದಲಾಗಿ 10ಕ್ಕೆ ಆರಂಭಿಸಲು ಸಹ ಮಂಡಳಿ ನಿರ್ಧರಿಸಿದೆ. ದೇವಸ್ಥಾನದಲ್ಲಿನ ನಿತ್ಯದ ಧಾರ್ಮಿಕ ವಿಧಿ–ವಿಧಾನಗಳ ಕಾರಣಗಳಿಂದಾಗಿ ಗಣ್ಯ ವ್ಯಕ್ತಿಗಳು ಬೆಳಿಗ್ಗೆ 8 ಇಲ್ಲವೇ 9 ಗಂಟೆ ವರೆಗೆ ದೇವರ ದರ್ಶನ ಪಡೆಯುತ್ತಿದ್ದರು. ಈ ಕಾರಣಗಳಿಂದಾಗಿಯೂ ಸಾಮಾನ್ಯ ಯಾತ್ರಿಗಳಿಗೆ ಸಮಸ್ಯೆಯಾಗುತ್ತಿತ್ತು. ಗಣ್ಯರು ದೇವರ ದರ್ಶನ ಮುಗಿಸಿ ಬರುವವರೆಗೆ ಸಾಮಾನ್ಯ ಯಾತ್ರಿಗಳು ಗಂಟೆಗಟ್ಟಲೆ ಕಂಪಾರ್ಟ್‌ ಮೆಂಟ್‌ಗಳಲ್ಲಿ ಮತ್ತು ಸರದಿಯಲ್ಲಿ ಕಾಯ ಬೇಕಾಗುತ್ತಿತ್ತು. 

‘ಈ ಬದಲಾವಣೆಗಳನ್ನು ಅಕ್ಟೋಬರ್‌ನಿಂದ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ’ ಎಂದು ಟಿಟಿಡಿ ಚೇರಮನ್ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.

ವಸತಿ ವ್ಯವಸ್ಥೆ: ‘ಮಂಡಳಿಯು 7,500 ಕೋಣೆಗಳನ್ನು ಹೊಂದಿದ್ದು, ನಿಯಮಿತ ಸಂಖ್ಯೆಯ ಯಾತ್ರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಇಷ್ಟು ಸಂಖ್ಯೆಯ ಕೋಣೆಗಳು ಸಾಕಾಗುತ್ತವೆ’ ಎಂದು ಟಿಟಿಡಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನೇಕ ಸಂದರ್ಭಗಳಲ್ಲಿ, ಯಾತ್ರಿಗಳು ತಿರುಮಲಕ್ಕೆ ಬಂದಾದ ಮೇಲೆ, ಕೋಣೆಗಳು ಖಾಲಿಯಾಗಿ, ತಮಗೆ ಹಂಚಿಕೆಯಾಗುವವರೆಗೆ ಕಾಯಬೇಕಾಗುತ್ತಿತ್ತು. ಈ ತೊಂದರೆಯನ್ನು ತಪ್ಪಿಸುವ ಸಲುವಾಗಿ ವಸತಿ ಸೌಲಭ್ಯ ಹಂಚಿಕೆ ಮಾಡುವ ಕೇಂದ್ರೀಯ ವ್ಯವಸ್ಥೆಯ ಕಚೇರಿಯನ್ನು ತಿರುಪತಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು.

‘ತಿರುಮಲದಲ್ಲಿ ವಸತಿ ಸೌಲಭ್ಯ ಸಿಗುವುದು ತಡವಾಗುತ್ತಿದ್ದಲ್ಲಿ, ತಿರುಪತಿಯಲ್ಲಿ ಪರ್ಯಾಯ ವಸತಿ ವ್ಯವಸ್ಥೆ ಮಾಡಿಕೊಳ್ಳಲು ಯಾತ್ರಿಗಳಿಗೆ ಅನುಕೂಲವಾಗುವುದು’

‘ಶ್ವೇತಪತ್ರ ಶೀಘ್ರ’: ‘ಮಂಡಳಿಯು ಹೊಂದಿರುವ ಸ್ವತ್ತುಗಳ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ಟಿಟಿಡಿಯ ವೆಬ್‌ಸೈಟ್‌ನಲ್ಲಿ ಶೀಘ್ರವೇ ಪ್ರಕಟಿಸಲಾಗುವುದು’ ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.

‘7,123 ಎಕರೆಯಲ್ಲಿ ಅಂದಾಜು ರೂ. 85,705 ಕೋಟಿ ಮೌಲ್ಯದ 960 ಸ್ವತ್ತುಗಳನ್ನು ಟಿಟಿಡಿ ಹೊಂದಿದೆ’ ಎಂದೂ ಅವರು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!