ಯಕ್ಷಗಾನ ರಂಗಕ್ಕೆ ಧಾರೇಶ್ವರರ ಕೊಡುಗೆ ಅಪಾರ- ಡಾ.ತಲ್ಲೂರು
ಉಡುಪಿ: ಯಕ್ಷಗಾನದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಯಕ್ಷಗಾನ ಕಲಾರಂಗಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಅವರ ಕಲಾ ಸೇವೆ ಯಕ್ಷಗಾನ ರಂಗಕ್ಕೆ ಹಾಗೂ ಅಭಿಮಾನಿಗಳಿಗೆ ಇನ್ನಷ್ಟು ಕಾಲ ಸಿಗುವಂತಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಶನಿವಾರ ಧಾರೇಶ್ವರ ಯಕ್ಷ ಬಳಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೈಂದೂರಿನ ನಾಗೂರು ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಸೆ.18ರಿಂದ 24ರವರೆಗೆ ನಡೆದ 8ನೇ ವರ್ಷದ ತಾಳಮದ್ದಲೆ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿದರು.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಸಹಕಾರದಲ್ಲಿ ಧಾರೇಶ್ವರ ಯಕ್ಷ ಬಳಗದಿಂದ ಕಳೆದ 8 ವರ್ಷಗಳಿಂದ ನಡೆಯುತ್ತಿರುವ ಯಕ್ಷಗಾನ ಪ್ರದರ್ಶನ ವಿಭಿನ್ನವಾಗಿ ಮೂಡಿಬರುವ ಮೂಲಕ ಬಹುಜನಪ್ರಿಯಗೊಂಡಿದೆ. ಸಂಗೀತ-ನರ್ತನ ಪ್ರಿಯ ಶ್ರೀಕೃಷ್ಣನಿಗೂ, ಪರ್ಯಾಯ ಸ್ವಾಮೀಜಿಗಳಿಗೂ ಪ್ರಿಯವಾಗಿದೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಧಾರೇಶ್ವರರಿಗೆ ಅಭಿಮಾನಿಗಳ ಪ್ರೋತ್ಸಾಹವೇ ಇನ್ನಷ್ಟು ಕಲಾಸೇವೆಗೆ ಪ್ರೇರಣೆಯಾಗಲಿ. ಅವರಿಂದ ಮತ್ತಷ್ಟು ಕಲಾ ಪ್ರಯೋಗಗಳು ನಡೆಯಲಿ ಎಂದು ಅವರು ಹಾರೈಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಯಕ್ಷಗಾನದಂತಹ ಕಲೆಯ ಉಳಿವಿಗೆ ಈಗಿಂದಲೇ ಮಕ್ಕಳನ್ನು ತಯಾರು ಮಾಡಬೇಕು. ಧಾರೇಶ್ವರರಂತಹ ಮಹಾನ್ ಕಲಾವಿದರು, ಯಕ್ಷಗಾನ ಅಭಿಮಾನಿಗಳು ಈ ನಿಟ್ಟಿನಲ್ಲಿ ಕಾರ್ಯವೆಸಗಿದರೆ ಮಾತ್ರ ಯಕ್ಷಗಾನಕ್ಕೆ ಭವಿಷ್ಯವಿದೆ ಎಂದರು.
ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯಕ್ಷಗಾನ ವಿಮರ್ಶಕರಾದ ಡಾ.ಎಚ್.ಎಸ್.ಮೋಹನ್ ಸಾಗರ ಹಾಗೂ ಎಂ.ಎಲ್.ಭಟ್ ಸಂದರ್ಭೋಚಿತವಾಗಿ ಮಾತನಾಡಿದರು. ಕರ್ನಾಟಕ ಯಕ್ಷಧಾಮ ಮಂಗಳೂರಿನ ಜನಾರ್ದನ ಹಂದೆ ಅವರು ತಾಳೆಮದ್ದಲೆ ಕೂಟದ ಬಗ್ಗೆ ಸ್ವರಚಿತ ಪದ್ಯವನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದ ಪ್ರಾಯೋಜಕರ ಪರವಾಗಿ ಅಶೋಕ್ ಪ್ರಭು ರಾಯಚೂರು ಉಪಸ್ಥಿತರಿದ್ದರು. ಸಪ್ತಾಹದ ರೂವಾರಿ, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಪ್ರಾಸ್ತಾವಿಕ ಮತುಗಳೊಂದಿಗೆ ಸ್ವಾಗತಿಸಿದರು.ಎಂ.ಗೋವಿಂದ ಮಟ್ನಕಟ್ಟೆ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಸಪ್ತಾಹದ ಕೊನೆಯ ತಾಳ ಮದ್ದಲೆ `ಶ್ರೀಕೃಷ್ಣ ಸಂಧಾನ ‘ ಪ್ರಸ್ತುತಿಗೊಂಡಿತು.