ಒಂದಕ್ಷರವನ್ನೂ ಬಿಡದೆ ನಾಡಗೀತೆ ಹಾಡುವುದಕ್ಕೆ ರಾಜ್ಯ ಸರಕಾರ ಸಮ್ಮತಿ
ಬೆಂಗಳೂರು ಸೆ.23: ಕುವೆಂಪು ವಿರಚಿತ ನಾಡಗೀತೆಯ ಖ್ಯಾತ ರಾಗ ಸಂಯೋಜಕ ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ದಾಟಿಯಲ್ಲಿ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ರಾಜ್ಯ ಸರಕಾರ ಸಮ್ಮತಿ ಸೂಚಿಸಿದೆ. ಈ ಮೂಲಕ ನಾಡಗೀತೆಗೆ ನಿರ್ದಿಷ್ಟ ಸಮಯ ಹಾಗೂ ದಾಟಿ ನಿಗದಿ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ದಶಕಗಳಿಂದ ಇದ್ದ ಗೊಂದಲಕ್ಕೆ ಅಂತ್ಯ ಸಿಕ್ಕಂತಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನಿಲ್ ಕುಮಾರ್ ಅವರು, “ಕುವೆಂಪು ವಿರಚಿತ ನಾಡಗೀತೆ”ಜಯ ಭಾರತ ಜನನಿಯ ತನುಜಾತೆ” ಗೆ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ ಎಂಬುದನ್ನು ತಿಳಿಸಲು ಹರ್ಷವೆನಿಸುತ್ತಿದೆ.
ಎಸ್.ಆರ್.ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಇನ್ನು ಎರಡು ನಿಮಿಷ ಮೂವತ್ತು ಸೆಕೆಂಡ್ ನಲ್ಲಿ ನಾಡಗೀತೆಯನ್ನು ಹಾಡಲಾಗುತ್ತದೆ.” ಎಂದು ತಿಳಿಸಿದ್ದಾರೆ.
ಯಾವುದೇ ಆಲಾಪ ಹಾಗೂ ಪುನರಾವರ್ತನೆ ಇಲ್ಲದಂತೆ ಎರಡು ನಿಮಿಷ ಮೂವತ್ತು ಸೆಕೆಂಡ್ ಗಳಲ್ಲಿ ನಾಡಗೀತೆಯನ್ನು ಹಾಡಲು ಸಾಧ್ಯ ಎಂದು ತಜ್ಞರು ನೀಡಿದ ವರದಿ ಆಧರಿಸಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ. ಇದೀಗ ರಾಜ್ಯ ಸರಕಾರದ ದಿಟ್ಟ ನಡೆಗೆ ನಾಡಿನ ಸಾಂಸ್ಕøತಿಕ ವಲಯದಿಂದ ಈಗ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ನಾಡಗೀತೆಗೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವ ವಿಚಾರ 2005 ರಿಂದಲೂ ಚರ್ಚೆಗಳು ನಡೆಯುತ್ತಿತ್ತು. ಕೆಲವು ಕಾರ್ಯಕ್ರಮಗಳಲ್ಲಿ ಏಳರಿಂದು ಎಂಟು ನಿಮಿಷಗಳ ಕಾಲ ನಾಡಗೀತೆ ಹಾಡುತ್ತಿದ್ದರು. ಇದು ಅಶಕ್ತರು, ವಿಕಲಚೇತನರಿಗೆ ಅನನುಕೂಲವಾಗುತ್ತಿತ್ತು. ಹೀಗಾಗಿ ದಾಟಿ ಹಾಗೂ ಕಾಲ ಮಿತಿಯ ಬಗ್ಗೆ ಸ್ಪಷ್ಟತೆ ತರಬೇಕೆಂಬ ಒತ್ತಾಯ ಸರಕಾರದ ಮುಂದೆ ಇತ್ತು. 2006 ರಲ್ಲಿ ಸಾಹಿತಿ ವಸಂತ ಕನಕಾಪುರೆ ನೇತೃತ್ವದಲ್ಲಿ ಸರಕಾರ ಒಂದು ಸಮಿತಿ ರಚಿಸಿತ್ತು. ಆದರೆ ಅವರ ಅಕಾಲಿಕ ಮರಣ ಹಿನ್ನೆಲೆಯಲ್ಲಿ ಚನ್ನವೀರ ಕಣವಿ ಅಧ್ಯಕ್ಷತೆಯಲ್ಲಿ ಸರಕಾರ ಮತ್ತೊಂದು ಸಮಿತಿ ರಚನೆ ಮಾಡಿತ್ತು. ಆದರೆ ಈ ಸಮಿತಿಯ ಸದಸ್ಯರಲ್ಲೇ ಸ್ಪಷ್ಟತೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ವಿ ಸುನೀಲ್ ಕುಮಾರ್ ನಾಡಗೀತೆಗೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವಂತೆ ಹಿರಿಯ ಸಂಗೀತ ವಿದೂಷಿ ಎಸ್.ಆರ್.ಲೀಲಾವತಿ ಅಧ್ಯಕ್ಷತೆಯಲ್ಲಿ ಹದಿನೆಂಟು ಜನರ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಎರಡು ನಿಮಿಷ ಮೂವತ್ತು ಸೆಕೆಂಡ್ ಗಳಲ್ಲಿ ನಾಡಗೀತೆ ಹಾಡಬೇಕೆಂದು ನೀಡಿದ್ದ ಶಿಫಾರಸು ಇದೀಗ ಅಧಿಕೃತಗೊಂಡಿದೆ.