ಸಿಂಗಲ್ ಲೇಔಟ್ ಸಮಸ್ಯೆಗೆ ಸರಕಾರದ ನಿರ್ಲಕ್ಷ್ಯವೇ ಕಾರಣ- ಶುಭದ ರಾವ್
ಕಾರ್ಕಳ ಸೆ.23(ಉಡುಪಿ ಟೈಮ್ಸ್ ವರದಿ): ಸಿಂಗಲ್ ಲೇಔಟ್ ಸಮಸ್ಯೆಗೆ ಸರಕಾರದ ನಿರ್ಲಕ್ಷ್ಯವೇ ಕಾರಣ, ಈ ಸಮಸ್ಯೆ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಭರವಸೆ ಮೂಡಿಸಿದ್ದು, ಇದೇ ಮಾದರಿಯಲ್ಲಿ ಇತರ ಎಲ್ಲಾ ಅರ್ಜಿದಾರರಿಗೂ ಖಾತಾ ನೀಡಬೇಕು ಎಂದು ಪುರಸಭಾ ಸದಸ್ಯ ಶುಭದ ರಾವ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಕಾರ್ಕಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕಳೆದ ಹಲವು ವರ್ಷಗಳಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸಿಂಗಲ್ ಲೇಔಟ್ ಸಮಸ್ಯೆಯಿಂದ ಜಮೀನು ಖರೀದಿ, ಮಾರಾಟ ಮತ್ತು ಮನೆ ನಿರ್ಮಾಣ ಅಸಾಧ್ಯವಾಗಿದ್ದು ನೂರಾರು ಕುಟುಂಬಗಳು ಆತಂಕದಲ್ಲಿದ್ದವು. ಸಾಲ ಮಾಡಿ ಜಮೀನು ಖರೀದಿಸಿದ್ದರೂ ಖಾತ ಆಗದ ಸಮಸ್ಯೆಯಿಂದ ಮನೆ ಕಟ್ಟಲು ಅಸಾಧ್ಯವಾಗಿದೆ. ಆದರೆ ಸೆ.3 ರಂದು ಉಚ್ಚ ನ್ಯಾಯಾಲಯ ನೀಡಿದ ಆದೇಶ ಜನರ ಆತಂಕವನ್ನು ದೂರ ಮಾಡಿದೆ. ಹಾಗೂ ಹೊಸ ಭರವಸೆಯನ್ನು ಮೂಡಿಸಿದೆ. ಈಗ ಹೈಕೋರ್ಟ್ ನೀಡಿರುವ ಆದೇಶವನ್ನೇ ಮಾದರಿಯಾಗಿ ಇಟ್ಟುಕೊಂಡು ಅರ್ಜಿ ಸಲ್ಲಿಸಿರುವ ಸುಮಾರು 400 ಕ್ಕೂ ಅಧಿಕ ಅರ್ಜಿದಾರರಿಗೆ ಖಾತ ನೀಡಲು ಪುರಸಭೆ ಮುಂದೆ ಬರಬೇಕು ಹಾಗೂ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಸಿಂಗಲ್ ಲೇಔಟ್ ಸಮಸ್ಯೆ ಬಗ್ಗೆ ಕೇಳಿದಾಗ ಶಾಸಕ ಸುನಿಲ್ ಕುಮಾರ್ ಅವರು ನಾನಾ ಕಾರಣಗಳನ್ನು ನೀಡುತ್ತಿದ್ದರು. ಈಗ ಇದಕ್ಕೆ ಉತ್ತರಿಸಬೇಕಾದ ಅನಿವಾರ್ಯತೆ ಇದೆ. ಸಿಂಗಲ್ ಲೇಔಟ್ ಸಮಸ್ಯೆಗೆ ತಿಂಗಳೊಳಗೆ ಪರಿಹಾರ ಮಾಡುವುದಾಗಿ ಅವರು ಕಳೆದ ವರ್ಷ ಹೇಳಿದ್ದರು. ಆದರೆ ಇದೀಗ ಅವರು ಭರವಸೆ ನೀಡಿ ಒಂದು ವರ್ಷವಾಗಿದೆ. ಆದರೆ ಅವರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಸಮಸ್ಯೆಗೆ ವಕೀಲರು ಕೋರ್ಟ್ ಗೆ ಹೋಗಿ ಆದೇಶ ಪಡೆದುಕೊಂಡು ಬಂದಿದ್ದಾರೆ ಎಂದಾದರೆ ಇದು ಸರಕಾರ, ಶಾಸಕರು ಹಾಗೂ ಸಚಿವರ ವೈಫಲ್ಯವೇ ಕಾರಣ ಎಂದು ಟೀಕಿಸಿದರು.
ಹಾಗೂ ಇತ್ತೀಚೆಗೆ ವಿಧಾನ ಸಭೆಯಲ್ಲಿ ಖಾತ ಸಮಸ್ಯೆ ಬಗ್ಗೆ ಚರ್ಚೆ ಆದಾಗ ವಿಪಕ್ಷದ ಉಪ ನಾಯಕ ಯುಟಿ ಖಾದರ್ ಅವರು ಚರ್ಚೆ ಮಾಡಿದ್ದು, ಹೊಸ ಕಾನೂನು ತರುವ ಭರಸವೆ ಅಧಿವೇಶನದಲ್ಲಿ ನೀಡಲಾಗಿದೆ. ಈ ಕಾನೂನು ಜನರ ಉಪಯೋಗಕ್ಕೆ ಸಹಕಾರ ವಾಗುವಂತೆ ಸರಳವಾಗಿ, ಹೈಕೋರ್ಟ್ ಆದೇಶಕ್ಕೆ ಪೂರಕವಾಗಿ ಬರಬೇಕು ಹಾಗೂ ಜನರಿಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ನಮ್ಮ ಸಚಿವರು ಕೂಡಾ ಪ್ರಯತ್ನಿಸಬೇಕು ಎಂದು ಮನವಿ ಮಾಡಿಕೊಂಡರು.