| ಹೊಸದಿಲ್ಲಿ ಸೆ.23: ವಾಟ್ಸಪ್ ನಲ್ಲಿ ಸ್ವೀಕರಿಸುವ ಸುದ್ದಿಗಳನ್ನು ಬಹುಪಾಲು ಭಾರತೀಯರು ನಂಬುತ್ತಾರೆ ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ರಾಯ್ಟರ್ಸ್ ಇನ್ ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ಜರ್ನಲಿಸಂ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
ಅಧ್ಯಯನದಲ್ಲಿ ಭಾರತ, ಬ್ರೆಝಿಲ್, ಯುನೈಟೆಡ್ ಕಿಂಗ್ ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‍ನ ನಾಗರಿಕರಿಗೆ ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳ ಮೇಲಿನ ನಂಬಿಕೆಯ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಪೈಕಿ ಭಾರತದಲ್ಲಿ ಪ್ರತಿಕ್ರಿಯಿಸಿದವರಲ್ಲಿ 77% ಜನರು ತಾವು ಸಾಮಾನ್ಯವಾಗಿ ಸುದ್ದಿ ಮಾಧ್ಯಮವನ್ನು ನಂಬುತ್ತಾರೆ ಎಂದು ಹೇಳಿದ್ದಾರೆ. ಅವರಲ್ಲಿ 54% ಅವರು ವಾಟ್ಸ್ ಆ್ಯಪ್ ನಲ್ಲಿ, 51% ಗೂಗಲ್ ಮತ್ತು ಯೂಟ್ಯೂಬ್ ನಲ್ಲಿ, 41% ಫೇಸ್‍ಬುಕ್‍ನಲ್ಲಿ, 27% ಇನ್‍ಸ್ಟಾಗ್ರಾಮ್‍ನಲ್ಲಿ, 25% ಟ್ವಿಟರ್‍ನಲ್ಲಿ ಮತ್ತು 15% ಟಿಕ್ ಟಾಕ್ ನಲ್ಲಿ ಸ್ವೀಕರಿಸುವ ಸುದ್ದಿಗಳನ್ನು ನಂಬುವುದಾಗಿ ಹೇಳಿದ್ದಾರೆ.
ಸುಮಾರು ಅರ್ಧದಷ್ಟು ಭಾರತೀಯರು (48%) ಅವರು ದಿನಕ್ಕೆ ಒಮ್ಮೆಯಾದರೂ ಆನ್ ಲೈನ್ ನಲ್ಲಿ ಸುದ್ದಿ ಪಡೆಯುತ್ತಾರೆ ಎಂದು ಹೇಳಿದ್ದಾರೆ, ಇದು ಅಧ್ಯಯನದ ಭಾಗವಾಗಿರುವ ನಾಲ್ಕು ದೇಶಗಳಲ್ಲಿ ಅತ್ಯಂತ ಕಡಿಮೆ ಅಂಕಿ ಅಂಶವಾಗಿದೆ. 34% ಭಾರತೀಯರು ಆನ್ ಲೈನ್ ಯಾವ ಮೂಲಗಳಿಂದಲೂ ಎಂದಿಗೂ ಸುದ್ದಿ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಇದು ಆ ನಾಲ್ಕು ದೇಶಗಳಲ್ಲಿ ಅತಿ ಹೆಚ್ಚು ಅಂಕಿ ಅಂಶವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಒಲವು ತೋರಿದವರಲ್ಲಿ 70% ರಷ್ಟು ಜನರು ವಾಟ್ಸ್ ಆ್ಯಪ್ ನಲ್ಲಿನ ಸುದ್ದಿಗಳನ್ನು ನಂಬುವುದಾಗಿ ಹೇಳಿದ್ದಾರೆ, ಆದರೆ ಮೋದಿ ಬಗ್ಗೆ ಪ್ರತಿಕೂಲವಾದ ಅಭಿಪ್ರಾಯಗಳನ್ನು ಹೊಂದಿರುವ 58% ರಷ್ಟು ಜನರು ವಾಟ್ಸಪ್ ಗಳಲ್ಲಿ ಬರುವುದನ್ನು ನಂಬುವುದಾಗಿ ಹೇಳಿದ್ದಾರೆ. ಬ್ರೆಝಿಲ್‍ನ 58% ಕ್ಕೆ ಹೋಲಿಸಿದರೆ ಭಾರತದಲ್ಲಿ 46% ಪ್ರತಿದಿನ ಸುದ್ದಿಗಳನ್ನು ಸ್ವೀಕರಿಸಲು ವಾಟ್ಸಪ್ ಅನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ. | |