| ಶಿವಮೊಗ್ಗ ಸೆ.20: ಐಸಿಸ್ ಉಗ್ರರ ಜೊತೆ ಸಂಪರ್ಕ ಹೊಂದಿರುವ ಸಂಶಯದ ಮೇಲೆ ಮೂವರು ಶಂಕಿತ ಉಗ್ರರನ್ನು ಶಿವಮೊಗ್ಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಿವಮೊಗ್ಗ ಸಿದ್ದೇಶ್ವರ ನಗರದ ಯಾಸಿನ್ ಮತ್ತು ಮಂಗಳೂರು ಮೂಲದ ಮಾಜ್ ಮುನಿರ್ ಅಹಮ್ಮದ್ ಬಂಧಿತ ಶಂಕಿತರು. ಪೊಲೀಸರ ಕಾರ್ಯಾಚರಣೆ ವೇಳೆ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ಶಾರಿಕ್ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯ ನಡೆಯಲು ಭಾರಿ ಸಂಚು ನಡೆದಿತ್ತು ಎಂಬ ಭಯಾನಕ ಮಾಹಿತಿ ಇದೀಗ ಬಹಿರಂಗವಾಗಿದೆ. ಈ ಬಗ್ಗೆ ಶಿವಮೊಗ್ಗ ಎಸ್ಪಿ ಬಿ.ಎಂ ಲಕ್ಷ್ಮಿ ಪ್ರಸಾದ್ ಅವರು ಮಾಧ್ಯಮವೊಂದರ ಜೊತೆಗೆ ಮಾಹಿತಿ ಹಂಚಿಕೊಂಡಿದ್ದು, ಐಸಿಸ್ ನಂಟು ಆರೋಪದಲ್ಲಿ ಇಬ್ಬರ ಬಂಧನವಾಗಿದೆ. 7 ದಿನಗಳ ಕಾಲ ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ, ಒಬ್ಬನಿಗೆ ಶೋಧ ನಡೆದಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 15 ರಂದು ನಡೆದ ಪ್ರೇಮಸಿಂಗ್ ಚಾಕು ಇರಿತ ಪ್ರಕರಣದ ಹಿನ್ನೆಲೆಯಲ್ಲಿ ಭದ್ರಾವತಿ ಡಿವೈಎಸ್ಪಿ ಜಿತೇಂದ್ರ ಅವರನ್ನ ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಡಿವೈಎಸ್ಪಿ ಜಿತೇಂದ್ರ ಅವರು ತಮ್ಮ ತನಿಖೆಯ ವೇಳೆ ಜಬೀವುಲ್ಲಾ ಮೊಬೈಲ್ ಪರಿಶೀಲನೆ ನಡೆಸಿದಾಗ ಉಗ್ರ ಸಂಘಟನೆಗಳ ಜತೆ ನಿರಂತರ ಸಂಪರ್ಕ ಹೊಂದಿರುವ ಮಾಹಿತಿ ಹೊರಬಿದ್ದಿದೆ. ಜಬೀವುಲ್ಲಾ ಮೇಲೆ ಮೂಲಭೂತವಾದಿಗಳು ಪ್ರಭಾವ ಬೀರಿದ್ದರು ಎನ್ನಲಾಗಿದೆ. | |