ವಿದ್ಯುತ್‌ ದರ ಕಡಿಮೆ ಮಾಡಿ ಜನರನ್ನು ಸಂಕಷ್ಟದಿಂದ ರಕ್ಷಿಸಿ-ಗೋಪಾಲ್ ಕುಲಾಲ್

ಹೆಬ್ರಿ: ರಾಜ್ಯದಲ್ಲಿ ಕೊರೋನ ಸಂಕಷ್ಟದ ಬಳಿಕ 3 ವರ್ಷದಿಂದ ರೈತರು, ಬಡ ಜನತೆ, ಉದ್ಯಮಗಳು ಸೇರಿ ಎಲ್ಲರೂ ತೀರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಲದ ಭಾರೀ ಮಳೆಯಿಂದಾಗಿ ಎಲ್ಲಾ ಕೃಷಿಯೂ ಸಂಪೂರ್ಣವಾಗಿ ಹಾಳಾಗಿದ್ದು ಬದುಕುವ ಪರಿಸ್ಥಿತಿಯೇ ಇಲ್ಲವಾಗಿದೆ, ಈ ನಡುವೆ ರಾಜ್ಯ ಸರ್ಕಾರ ವಿದ್ಯುತ್‌ ಬೆಲೆ ಏರಿಸಿ ಜನರನ್ನು ಇನ್ನಷ್ಟು ಸಮಸ್ಯೆಗೆ ದೂಡಿದೆ, ಜನತೆ ಎಲ್ಲಾ ಸಮಸ್ಯೆಗಳಿಂದ ಹೊರಬರುವ ತನಕ ಏರಿಸಿದ ವಿದ್ಯುತ್‌ ಬೆಲೆಯನ್ನು ತಕ್ಷಣ ಇಳಿಸಿ ಜನತೆಗೆ ಸರ್ಕಾರ ಸಹಾಯ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಮುನಿಯಾಲು ಗೋಪಾಲ ಕುಲಾಲ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೋರೊನ ಬಳಿಕ ಹಲವರು ಉದ್ಯೋಗ ಕಳೆದು ಕೊಂಡಿದ್ದಾರೆ. ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ವಿವಿಧ ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆ, ತೈಲ ಬೆಲೆ ಏರಿಕೆಯಿಂದಾಗಿ ಜನ ಜೀವನ ಮಾಡುವುದೇ ಕಷ್ಟವಾಗಿದೆ. ಇಂಧನ ಇಲಾಖೆಯವರು ಜನತೆ ವಿದ್ಯುತ್‌ ಬಿಲ್ಲು ಪಾವತಿಸುವುದು ವಿಳಂಭವಾದರೆ ಕಿರುಕುಳ ನೀಡುವುದು, ವಿದ್ಯುತ್‌ ಸಂಪರ್ಕ ಕಡಿತ ಮಾಡುವುದು, ಬಿಲ್‌ ಕಟ್ಟಲು ಒತ್ತಡ ಹಾಕುವುದು ಮಾಡಬಾರದು. ಜನತೆ ಪಾವತಿಯನ್ನು ಮಾಡುತ್ತಾರೆ. ಇಂಧನ ಇಲಾಖೆಯವರು ಜನತೆಗೆ ಕಿರುಕುಳ ನೀಡಿದರೇ ರೈತ ಸಂಘವು ಇಂಧನ ಇಲಾಖೆಗೆ ಮುತ್ತಿಗೆ ಹಾಕುತ್ತದೆ. ಇಂಧನ ಸಚಿವ ಸುನಿಲ್‌ ಕುಮಾರ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಜನರನ್ನು ಸಂಕಷ್ಟದಿಂದ ರಕ್ಷಿಸಬೇಕು ಎಂದು ಮುನಿಯಾಲು ಗೋಪಾಲ ಕುಲಾಲ್‌ ಮನವಿ ಮಾಡಿದ್ದಾರೆ. ಸ್ವಾಭಿಮಾನಿಗಳಾದ ಉಡುಪಿ ದಕ್ಷಿಣಕನ್ನಡದ ಜನತೆ ತೀವೃ ಸಂಕಷ್ಟ ಎದುರಿಸುತ್ತಿದ್ದಾರೆ. ರೈತ ಮುಖಂಡರ ಬಳಿ ರೈತರು ನೋವು ತೋಡಿಕೊಳ್ಳುತ್ತಿದ್ದಾರೆ. ರೈತರ ಸಂಘವು ರಾಜಕೀಯ ರಹಿತವಾಗಿ ಎಲ್ಲರ ಸೇವೆ ಮಾಡುತ್ತದೆ, ರೈತರು ಸೇರಿ ಸಮಸ್ಯೆ ಎದುರಿಸುವ ಎಲ್ಲರ ಪರವಾಗಿ ರೈತ ಸಂಘ ಕೆಲಸ ಮಾಡುತ್ತಿದೆ. ಕಷ್ಟಕ್ಕೆ ಮಾಡಿರುವ ಸ್ವಸಹಾಯ ಸಂಘದ ಸಾಲ,

ಬ್ಯಾಂಕ್‌ ಸಹಿತ ವಿವಿಧ ಸಾಲಗಳಿಂದ ಹೇಳಿಕೊಳ್ಳಲಾಗದ ಸಮಸ್ಯೆಯನ್ನು ಜನತೆ ಎದುರಿಸುತ್ತಿದ್ದಾರೆ. ಸರ್ಕಾರ ಎಲ್ಲವನ್ನೂ ಗಮನಿಸಿ ಸರ್ಕಾರ ಕೆಲವು ವರ್ಷದ ಮಟ್ಟಿಗಾದರೂ ವಿದ್ಯುತ್‌ ಬಿಲ್‌ ಕಡಿಮೆ ಮಾಡಿ ಎಂದು ಮುನಿಯಾಲು ಗೋಪಾಲ ಕುಲಾಲ್‌ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!