ಶಂಕರನಾರಾಯಣ: ಹಲ್ಲೆಗೈದು ಜೀವ ಬೆದರಿಕೆ- ಧರ್ಮಗುರು ಸಹಿತ ಮೂವರ ವಿರುದ್ಧ ದೂರು ದಾಖಲು
ಶಂಕರನಾರಾಯಣ ಸೆ.19(ಉಡುಪಿ ಟೈಮ್ಸ್ ವರದಿ): ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಹೆಬ್ರಿಯ ಬೆಳ್ವೆ ಗ್ರಾಮದ ಗುಮ್ಮಹೊಲದ ಸಂತ ಜೊಸೇಪರ ಚರ್ಚ್ ನ ಧರ್ಮಗುರು ಅಲೆಕ್ಸಾಂಡರ್ ಲೂಯಿಸ್ ಸೇರಿದಂತೆ ಮೂವರ ವಿರುದ್ಧ ಶಂಕರ ನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಚರ್ಚ್ ನಲ್ಲಿ ಪ್ರಾರ್ಥನೆಗೆ ಹೋಗುತ್ತಿದ್ದ ಬೆಳ್ವೆಯ ಗುಮ್ಮಹೊಲ ಗ್ರಾಮದ ಶಾಂತಿ ಡೇಸಾ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಗುಮ್ಮಹೊಲದ ಸಂತ ಜೊಸೇಪರ ಚರ್ಚ್ ನ ಧರ್ಮ ಗುರು ಅಲೆಕ್ಸಾಂಡರ್ ಲೂಯಿಸ್ ರವರು ಭಕ್ತರೊಂದಿಗೆ ಯಾವಾಗಲೂ ವಿನಾಕಾರಣ ಜಗಳ ಮಾಡುತ್ತಿದ್ದು, ಈ ಕಾರಣದಿಂದ ಇವರ ನಡುವೆ ಮನಸ್ತಾಪ ಉಂಟಾಗಿರುತ್ತದೆ. ಅಲ್ಲದೆ ಇತ್ತೀಚೆಗೆ ಸೆ.8 ಮತ್ತು ಸೆ.11 ರಂದು ಎರಡು ಬಾರಿ ಪ್ರಾರ್ಥನೆ ಮಾಡುತ್ತಿದ್ದ ವೇಳೆ ಧರ್ಮಗುರುಗಳು ಪ್ರಾರ್ಥನೆ ಹಾಳು ಮಾಡಿ ಭಕ್ತರಿಗೆ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರಿದ್ದಾರೆ.
ಇದರೊಂದಿಗೆ ಸೆ.18 ರಂದು ಶಾಂತಿ ಡೇಸಾ ಅವರು ಬೆಳಿಗ್ಗೆ ಭಕ್ತರು ಪ್ರಾರ್ಥನೆ ಮಾಡಲು ಚರ್ಚ್‍ಗೆ ಬಂದಾಗ ಧರ್ಮ ಗುರುಗಳು ಆನ್ ಲೈನ್ ಮೂಲಕ ಪ್ರಾರ್ಥನೆ ಮಾಡಿದ್ದರು. ಆ ಬಳಿಕ ಶಾಂತಿ ಡೇಸಾ ಅವರೊಂದಿಗೆ ಬಂದಿದ್ದ ಪ್ರಿಯಾ ಡಿ’ಸೋಜಾ ಹಾಗೂ ಸ್ಯಾಂಡ್ರಾ ಎಂಬುವವರು ಚರ್ಚನ ಬಳಿ ಇರುವ ಹಾಸ್ಟೆಲ್‍ಗೆ ನೀರು ಕುಡಿಯಲು ಹೋಗಿದ್ದ ವೇಳೆ ಪ್ರವೀಣ ಹಾಗೂ ಆತನ ತಂದೆ ಇವರಿಗೆ ಹಾಸ್ಟೇಲ್ ಒಳಗಡೆ ಬರಬೇಡಿ, ಗುಮ್ಮ ಹೊಲದ ಕೈಸ್ತರು ಚರ್ಚಿನ ಪರಿಸರದಲ್ಲಿ ಸುತ್ತಾಡಿದರೇ ಅವರಿಗೆ ಹಲ್ಲೆ ಮಾಡಿ ಎಂದು ಧರ್ಮಗುರುಗಳು ಹೇಳಿದ್ದಾರೆ ಎಂದು ತಿಳಿಸಿ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಹಾಗೂ ಗುಮ್ಮಹೊಲದ ಸಂತ ಜೊಸೇಪರ ಚರ್ಚ್ ನ ಧರ್ಮ ಗುರು ಅಲೆಕ್ಸಾಂಡರ್ ಲೂಯಿಸ್ ರವರ ಪ್ರಚೋದನೆಯಿಂದ ಹಲ್ಲೆ ಮಾಡಿರುವುದಾಗಿ, ಹಲ್ಲೆಯಿಂದ ಗಾಯಗೊಂಡ ಅವರು ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.