ಕೃಷಿಭೂಮಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಇನ್ನು ಮುಂದೆ 7 ದಿನದಲ್ಲೇ ಮಂಜೂರಾತಿ

ಬೆಂಗಳೂರು: ಕೃಷಿಭೂಮಿಯಲ್ಲಿ ಸ್ವಂತಕ್ಕೆ ಮನೆ, ಕೃಷಿ ಪರಿಕರಗಳನ್ನು ಸಂಗ್ರಹಿಸಿಡಲು ಕಟ್ಟಡ, ತೋಟದ ಮನೆ ನಿರ್ಮಿಸಿಕೊಳ್ಳಲು ರೈತರು ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೇ ಮಂಜೂರಾತಿ ಆದೇಶ ಹೊರಡಿಸಲು ಜಿಲ್ಲಾಧಿಕಾರಿಗೆ ಗಡುವು ವಿಧಿಸುವ ಉದ್ದೇಶದಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರಸಕ್ತ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡನೆ ಆಗಲಿದೆ.

ಕೃಷಿಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ರೈತ ಸ್ನೇಹಿ ಗೊಳಿಸುವುದು ತಿದ್ದುಪಡಿಯ ಉದ್ದೇಶ.

ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್‌ 95ಕ್ಕೆ ತಿದ್ದುಪಡಿಗೆ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿದು ಬಂದಿದೆ.

ಮಹಾ ಯೋಜನೆ (ಮಾಸ್ಟರ್‌ ಪ್ಲಾನ್‌) ಅಥವಾ ನಗರ ಯೋಜನಾ ಪ್ರಾಧಿಕಾರದ ಮಂಜೂರಾತಿ ಅನ್ವಯ ಕೃಷಿಭೂಮಿ ಅಥವಾ ಅದರ ಭಾಗವನ್ನು ಯಾವುದಾದರೂ ಇತರ ಉದ್ದೇಶಕ್ಕೆ ಬಳಸಲು ಇಚ್ಚಿಸುವವರು ನಿಗದಿಪಡಿಸಿದ ದಂಡ ಪಾವತಿಸಿ ಪ್ರಮಾಣಪತ್ರ ಸಹಿತ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಹೀಗೆ ಸಲ್ಲಿಕೆಯಾದ ಅರ್ಜಿಗಳಿಗೆ ಏಳು ದಿನಗಳಲ್ಲಿ ಜಿಲ್ಲಾಧಿಕಾರಿ ಮಂಜೂರಾತಿ ಆದೇಶ ಹೊರಡಿಸಬೇಕು. 15 ದಿನ ಕಳೆದರೂ ಜಿಲ್ಲಾಧಿಕಾರಿ ಅರ್ಜಿಗಳ ವಿಲೇವಾರಿ ಮಾಡದಿದ್ದರೆ, ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಆಗಿದೆ ಎಂದು ಪರಿಭಾವಿಸಿಕೊಳ್ಳಬಹುದು ಎಂದು ಪ್ರಸ್ತಾವಿತ ಮಸೂದೆಯಲ್ಲಿ ತಿಳಿಸಲಾಗಿದೆ.

ಮಾಸ್ಟರ್‌ ಪ್ಲಾನ್‌ ಪ್ರಕಟವಾಗದೇ ಇದ್ದರೆ ಅಥವಾ ಸ್ಥಳೀಯ ಯೋಜನಾ ಪ್ರದೇಶದ ಹೊರಗಿನ ಕೃಷಿ ಭೂಮಿ ಆಗಿದ್ದರೆ, ಅರ್ಜಿ ಸಲ್ಲಿಕೆಯಾದ 15 ದಿನಗಳ ಒಳಗೆ ಸಂಬಂಧಿಸಿದ ಸ್ಥಳೀಯ ಪ್ರಾಧಿಕಾರದ ಅಧಿಕಾರಿಗಳು ಅಭಿಪ್ರಾಯ ನೀಡಬೇಕು. ಆ ಅಭಿಪ್ರಾಯ ಆಧರಿಸಿ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿ ಮಂಜೂರಾತಿ ನೀಡಬೇಕು. ನಿಗದಿಪಡಿಸಿದ ಅವಧಿಯ ಒಳಗೆ ಅಧಿಕಾರಿಗಳು ಅಭಿಪ್ರಾಯ ನೀಡಲು ವಿಫಲರಾದರೆ, ಭೂ ಪರಿವರ್ತನೆಗೆ ಯಾವುದೇ ಆಕ್ಷೇಪ ಇಲ್ಲವೆಂದು ಭಾವಿಸಿ 30 ದಿನಗಳ ಒಳಗೆ ಜಿಲ್ಲಾಧಿಕಾರಿ ಮಂಜೂರಾತಿ ಆದೇಶ ಹೊರಡಿಸಬೇಕು. ಆ ಅವಧಿಯೊಳಗೆ ಆದೇಶ ಹೊರಡಿಸದಿದ್ದರೆ, ಅನುಮತಿ ನೀಡಲಾಗಿದೆ ಎಂದು ಭಾವಿಸಿಕೊಳ್ಳಲು ಕೂಡಾ ಅವಕಾಶ ನೀಡಲಾಗಿದೆ.

ಪ್ರಮಾಣಪತ್ರದಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿ ನೀಡಿದರೆ ಅಪರಾಧವಾಗಲಿದೆ. ಅಲ್ಲದೆ, ಭೂ ಪರಿವರ್ತನೆ ಆದೇಶವನ್ನು ಜಿಲ್ಲಾಧಿಕಾರಿ ರದ್ದುಪಡಿಸಬಹುದು. ಭೂ ಪರಿವರ್ತನೆಗೆ ಕಟ್ಟಿದ ದಂಡ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಸುಳ್ಳು ಪ್ರಮಾಣಪತ್ರ ಸಲ್ಲಿಸಿ ಭೂ ಪರಿವರ್ತನೆ ಮಾಡಿಕೊಂಡಿದ್ದರೆ, ಅಂಥ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ಹೊರಡಿಸಲೂ ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ.

ಒಟ್ಟು ಕೃಷಿ ಭೂಮಿಯ ಸರ್ವೆ ನಂಬರ್‌ನ ಒಂದು ಭಾಗವನ್ನು ಭೂ ಪರಿವರ್ತನೆ ಮಾಡುವುದಾದರೆ, ಸರ್ವೆ ಸೆಟ್ಲಮೆಂಟ್‌ ಮತ್ತು ಭೂ ದಾಖಲೆಗಳ ಇಲಾಖೆಯಿಂದ ಮಂಜೂರು ಮಾಡಿದ ಭೂ ಪರಿವರ್ತನೆಗೂ ಮೊದಲಿನ ನಕ್ಷೆಯನ್ನು ಅರ್ಜಿಯ ಜೊತೆ ಕಡ್ಡಾಯವಾಗಿ ಸಲ್ಲಿಸಬೇಕು. ಭೂ ಪರಿವರ್ತನೆಗೆ ಪೂರ್ವದ ನಕ್ಷೆಗಾಗಿ ಸಲ್ಲಿಸಿದ ಅರ್ಜಿಯನ್ನು ಸರ್ವೆ ಸೆಟ್ಲ್‌ಮೆಂಟ್‌ ಮತ್ತು ಭೂ ದಾಖಲೆಗಳ ಇಲಾಖೆ 15 ದಿನಗಳಲ್ಲಿ ವಿಲೇವಾರಿ ಮಾಡದಿದ್ದರೆ, ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ಭಾವಿಸಬಹುದು ಎಂಬ ಅಂಶವೂ ತಿದ್ದುಪಡಿಯಲ್ಲಿ ಸೇರಿದೆ.

ಕಾಯಿದೆ ಉಲ್ಲಂಘಿಸಿದರೆ ದಂಡ ಮೊತ್ತ ರೂ. 1 ಲಕ್ಷಕ್ಕೆ ಹೆಚ್ಚಳ

ಭೂ ಕಂದಾಯ ಕಾಯ್ದೆಯ ಸೆಕ್ಷನ್‌ಗಳನ್ನು ಉಲ್ಲಂಘಿಸಿದರೆ ವಿಧಿಸಲಾಗುವ ದಂಡದ ಮೊತ್ತವನ್ನೂ ಹೆಚ್ಚಿಸುವ ಬಗ್ಗೆಯೂ ತಿದ್ದುಪಡಿ ಮಸೂದೆಯಲ್ಲಿದೆ.

ಕೃಷಿ ಭೂಮಿಯನ್ನು ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ಅನ್ಯ ಉದ್ದೇಶಗಳಿಗೆ ಬಳಸಿದರೆ ಅಥವಾ ಸುಳ್ಳು, ತಪ್ಪು ಪ್ರಮಾಣಪತ್ರ ಸಲ್ಲಿಸಿ ಭೂ ಪರಿವರ್ತನೆ ಮಾಡಿಸಿಕೊಂಡಿದ್ದರೆ ವಿಧಿಸಲಾಗುವ ದಂಡದ ಮೊತ್ತವನ್ನು ರೂ. 1 ಸಾವಿರದಿಂದ ರೂ. 1 ಲಕ್ಷಕ್ಕೆ ಹೆಚ್ಚಿಸಲಾಗುವುದು. ಅಲ್ಲದೆ, ಈ ಕಾನೂನು ಉಲ್ಲಂಘನೆ ಮುಂದುವರಿದರೆ ದಿನವೊಂದಕ್ಕೆ ವಿಧಿಸುವ ರೂ. 25 ದಂಡ ಮೊತ್ತವನ್ನು ರೂ. 2,500ಕ್ಕೆ ಹೆಚ್ಚಿಸಲಾಗುವುದು.

ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು

ಭೂ ಪರಿವರ್ತನೆಗೆ ಅರ್ಜಿದಾರರು ನಾಡಕಚೇರಿ, ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಆನ್‌ಲೈನ್‌ ಮೂಲಕ ಡಿ.ಸಿಗೆ ಎನ್‌ಒಸಿ ಇಲ್ಲದೆ, ಕನಿಷ್ಠ ದಾಖಲೆಗಳೊಂದಿಗೆ ಅರ್ಜಿ ಸಲಿಸಬಹುದು. ತಕ್ಷಣ ಇತರೆ ಇಲಾಖೆಗಳು, ಪ್ರಾಧಿಕಾರಗಳ ಅಭಿಪ್ರಾಯಕ್ಕೆ ಅರ್ಜಿಯನ್ನು ಆನ್‌ಲೈನ್‌ ಮೂಲಕ ಏಕಕಾಲಕ್ಕೆ ಕಳಿಸಲಾಗುತ್ತದೆ. ಅರ್ಜಿದಾರರು ಪ್ರಸಕ್ತ ವರ್ಷದ ಪಹಣಿ, ಹಕ್ಕು ಬದಲಾವಣೆ ದಾಖಲಾತಿ ಪ್ರತಿ, 11-ಇ ನಕ್ಷೆ (ಒಂದು ಸರ್ವೆ ನಂಬರಿನಲ್ಲಿ ಭಾಗಶಃ ಭೂ ಪರಿವರ್ತನೆಗೆ ಮನವಿ ಮಾಡಿದಾಗ ಮಾತ್ರ 11-ಇ ನಕ್ಷೆ ಹಾಜರುಪಡಿಸಬೇಕು), ಪ್ರಮಾಣಪತ್ರ ಸಲ್ಲಿಸಬೇಕು. ಆನ್‌ಲೈನ್‌ ಮೂಲಕ ಅಭಿಪ್ರಾಯಕ್ಕಾಗಿ ಇತರೆ ಇಲಾಖೆ, ಪ್ರಾಧಿಕಾರಗಳಿಗೆ ಕಳಿಸಿದ ತಕ್ಷಣ ಅಭಿಪ್ರಾಯ, ವರದಿ ಬಾರದಿದ್ದರೆ ಭೂ ಪರಿವರ್ತನೆಗೆ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ ಕ್ರಮ ವಹಿಸಲು ಅವಕಾಶ ಕಲ್ಪಿಸಲಾಗಿದೆ. 

3 thoughts on “ಕೃಷಿಭೂಮಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಇನ್ನು ಮುಂದೆ 7 ದಿನದಲ್ಲೇ ಮಂಜೂರಾತಿ

  1. ಈಗ ಸರ್ವೇ ನಂಬರ್ ಗಳಲ್ಲಿ ಕಟ್ಟಿರುವಂತಹಾ ಮನೆಗಳನ್ನು ಸಕ್ರಮ ಮಾಡಿ ಮೂದಲು,ಉಳಿದದ್ದು ಆಮೇಲೇ ಮಾಡಿ

  2. ಇದು ಉಡುಪಿ ಜಿಲ್ಲೆಯಲ್ಲಿ ಜಾರಿಗೆ ಬರುವುದು ಯಾವಾಗ……..?
    ಸರಿಯಾದ ಉತ್ತರ ಕೊಡಿ

Leave a Reply

Your email address will not be published. Required fields are marked *

error: Content is protected !!