ಪ್ರಧಾನಿ ಮೋದಿ ಹುಟ್ಟೂರಲ್ಲಿ ಬೃಹತ್ ಉಚಿತ ನೇತ್ರ ಚಿಕಿತ್ಸಾ ಶಿಬಿರ, ಕನ್ನಡಕ ವಿತರಣೆ

ಉಡುಪಿ, ಸೆ.17(ಉಡುಪಿ ಟೈಮ್ಸ್ ವರದಿ): ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಅವರ ಹುಟ್ಟೂರಾದ ಗುಜರಾತಿನ ವಾಡ್ ನಗರದಲ್ಲಿ ಬೃಹತ್ ಉಚಿತ ನೇತ್ರ ಚಿಕಿತ್ಸಾ ಶಿಬಿರ, ಉಚಿತ ಕನ್ನಡಕ ವಿತರಣೆ ಮತ್ತು ನೇತ್ರದಾನ ನೋಂದಣಿ ಶಿಬಿರ ನಡೆಸಲಾಯಿತು.

ಉಡುಪಿಯ ಪ್ರಸಾದ ನೇತ್ರಾಲಯ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಸರ್ವೋದಯ ಸೇವಾ ಟ್ರಸ್ಟ್, ಅಹಮದಾಬಾದ್, ಜಿ.ಎಂ.ಇ ಆರ್ ಎಸ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ವಾಡ್ ನಗರ ಹಾಗೂ ವನ್ ಸೈಟ್ ಎಸ್ಸೀಲಾರ್ ಲಕ್ಸೊಟ್ಟಿಕಾ ಫೌಂಡೇಶನ್, ಬೆ0ಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹಿರಿಯ ಸಹೋದರ ಸೋಮ ಭಾಯ್ ಮೋದಿಯವರು ಉದ್ಘಾಟಿಸಿದರು.

ಈ ಶಿಬಿರದಲ್ಲಿ ನರೇಂದ್ರ ಮೋದಿಯವರ ಕುಟುಂಬದ ಸದಸ್ಯರೂ ಸೇರಿ ಏಳು ನೂರಕ್ಕೂ ಹೆಚ್ಚು ಜನರು ತಮ್ಮ ಕಣ್ಣಿನ ತಪಾಸಣೆಯನ್ನು ಮಾಡಿಕೊಂಡರು. ಹಾಗೂ ಸುಮಾರು ಐನೂರಕ್ಕೂ ಹೆಚ್ಚು ಜನರಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು. ಇದರ ಜೊತೆಗೆ ನೂರಕ್ಕೂ ಮಿಕ್ಕಿ ಜನರಿಗೆ ಉಚಿತ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಲೋಕ ಸಭಾ ಸದಸ್ಯರಾದ ಶಾರದಾ ಬೆನ್ ಪಟೇಲ್, ರಾಜ್ಯಸಭಾ ಸದಸ್ಯರಾದ ಜುಗಲ್ ಜಿ ಲೋಖಂಡ್ ವಾಲ , ಪ್ರಸಾದ ನೇತ್ರಾಲಯದ ಮುಖ್ಯಸ್ಥರಾದ ಡಾ. ಕೃಷ್ಣ ಪ್ರಸಾದ ಕೂಡ್ಲು, ವನ್ ಸೈಟ್ ಫೌಂಡೇಶನ್ ನ ವ್ಯವಸ್ಥಾಪಕ ಧರ್ಮಪ್ರಸಾದ್ ರೈ, ಮುಂಬೈ ಭಾಜಪ ಕಾರ್ಯದರ್ಶಿ ಮೋಹನ್ ಗೌಡ, ಅಭಿನವ ಗ್ಲೋಬಲ್ ಅಕಾಡೆಮಿಯ ವಿದ್ಯಾಶಂಕರ್, ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ
ಸಹೋದರ ಪ್ರಹ್ಲಾದ ಮೋದಿ ಮತ್ತು ಗುಜರಾತ್ ಸರಕಾರ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!