ಕಾರ್ಕಳ: ರಸ್ತೆ ಅವ್ಯವಸ್ಥೆ ಖಂಡಿಸಿ ವಿನೂತನ ಪ್ರತಿಭಟನೆ
ಕಾರ್ಕಳ, ಸೆ.17: ಭವಾನಿ ಮಿಲ್ ನಿಂದ ಮೂರು ಮಾರ್ಗದ ತನಕ ವರೆಗಿನ ಮಂಗಳೂರು ರಸ್ತೆ ದುರಸ್ಥಿಗೆ ಆಗ್ರಹಿಸಿ ಇಂದು ಕಾರ್ಕಳದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಭವಾನಿ ಮಿಲ್ ನಿಂದ ಮೂರು ಮಾರ್ಗದ ತನಕ ವರೆಗಿನ ಮಂಗಳೂರು ರಸ್ತೆ ದುರಸ್ಥಿಗೆ ಆಗ್ರಹಿಸಿ ಸಾರ್ವಜನಿಕ ಪ್ರತಿಭಟನೆಯು ಕಾರ್ಕಳ ವಿಸ್ತೃತ ಬಸ್ನಿಲ್ದಾಣದಿಂದ ಹೊರಟು ಮೂರು ಮಾರ್ಗ ತಲುಪುತ್ತಿದ್ದಂತೆ ಚಿನ್ನದ ರಸ್ತೆಯ ಉದ್ಘಾಟನೆಯ ಪ್ರವಸನವನ್ನು ರಿಬ್ಬನ್ ಕತ್ತರಿಸುವ ಮೂಲಕ ನಡೆಸಲಾಯಿತು. ಅಲ್ಲಿಂದ ಹೊರಟ ಮೆರವಣಿಗೆಯೂ ಕಾಮಧೇನು ಹೋಟೆಲ್ನ ಮುಂಭಾಗದಲ್ಲಿ ಸಂಪನ್ನಗೊಂಡಿತು.
ಬಳಿಕ ಅಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆ ಮಾತನಾಡಿದ ಪುರಸಭಾ ಸದಸ್ಯ ಶುಭದರಾವ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ, ನಗರದ ಮಂಗಳೂರು ರಸ್ತೆ ಅಭಿವೃದ್ಧಿಯ ಕುರಿತು ಕಾರ್ಕಳ ಪುರಸಭೆ ನಿರ್ಲಕ್ಷಿಸಿದ ಪರಿಣಾಮವಾಗಿ ರಸ್ತೆ ಪೂರ್ತಿ ಹೊಂಡ ಗುಂಡಿಗಳು ತೆರದುಕೊಂಡು ವಾಹನ ಸಂಚಾರಕ್ಕೆ ಅಯೋಗ್ಯವೆನಿಸಿದೆ. ಇದರ ಕುರಿತು ಆಡಳಿತಕ್ಕೆ ಎಚ್ಚರಿಕೆಯ ರೀತಿಯಲ್ಲಿ ಪ್ರಯತ್ನಿಸಿದರೆ, ಆಡಳಿರೂಢ ಪಕ್ಷವು ನಮ್ಮ ಹೋರಾಟವನ್ನು ಹತ್ತಿಕ್ಕುವುದಕ್ಕೆ ಮುಂದಾಗುತ್ತಿರುವುದು ಪ್ರಜಾಪ್ರಭುತ್ವ ಮೇಲೆ ನಡೆಸಿರುವ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ರಸ್ತೆಯು ಪುರಸಭೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಮಳೆಗಾಲದಲ್ಲಿ ಸಂಪೂರ್ಣ ಕೆಸರುಮಯವಾಗಿ ಚಿನ್ನದ ರಸ್ತೆಯಂತೆ ಹೊಳೆಯುತ್ತಿತ್ತು. ನಾಗರಿಕರ ಹೋರಾಟ ಮುನ್ಸೂಚನೆ ಅರಿತು ಕೊಂಡ ಪುರಸಭಾ ಆಡಳಿತ ವರ್ಗವು ಆಹೋರಾತ್ರಿ ಎನ್ನದೇ ದಿನಗಳ ಹಿಂದೆಯಷ್ಟೇ ಆ ರಸ್ತೆಗೆ ಜಲ್ಲಿಪುಡಿ ತಂದು ಹಾಕಿರುವ ಮೂಲಕ ಚಿನ್ನದ ರಸ್ತೆಗೆ ಬೆಳ್ಳಿಯ ಲೇಪನ ಹಾಕಿದಂತಾಗಿದೆ. ಮುಂದಿನ ಎರಡು ದಿನಗಳಲ್ಲಿ ಸುರಿಯುವ ಮಳೆಗೆ ಆ ಜಲ್ಲಿಪುಡಿ ರಸ್ತೆ ತೊಳೆದು ಮತ್ತೇ ಮೊದಲಿನಂತೆ ಹೊಂಡ ಕಾಣಸಿಗಲಿದೆ. ಈ ನಡುವೆ ರಸ್ತೆಯಲ್ಲಿ ನಿಂತಿರುವ ಮಳೆ ನೀರು ಹಾಗೂ ಜಲ್ಲಿಪುಡಿ ಮಿಶ್ರಣದ ಕೆಸರು ನೀರು ನಾಗರಿಕರಿಗೆ ಅಭಿಷೇಕವಾಗಲಿದೆ. ಇದು ಪುರಸಭೆ ಆಡಳಿತ ವೈಖರಿಗೆ ಹಿಡಿದ ಕನ್ನಡಿ ಎಂದು ಲೇವಡಿ ಮಾಡಿದರು.
ಮಂಗಳೂರು ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾರ್ಪಾಡು ಮಾಡುವಲ್ಲಿ ಕ್ಷೇತ್ರದ ಶಾಸಕರಾಗಿರುವ ಸಚಿವ ವಿ.ಸುನೀಲ್ ಕುಮಾರ್ ಹಾಗೂ ಬಿಜೆಪಿ ಆಡಳಿತ ಇರುವ ಕಾರ್ಕಳ ಪುರಸಭೆಯು ಮುಂದಾಗಬೇಕು. ಆ ಅಭಿವೃದ್ಧಿ ಕಾರ್ಯ ನಡೆದರೆ ನಾವೇ ಖುದ್ಧಾಗಿ ಇದೇ ರೀತಿಯಲ್ಲಿ ಮೆರವಣಿಗೆ ನಡೆಸಿ ಸಾಧಕರಿಗೆ ಹಾರ ಹಾಕಿ ಸನ್ಮಾನಿಸುತ್ತೇವೆ. ಇಲ್ಲದೇ ಹೋದಲ್ಲಿ ಈಗ ಕೋಣ ಮುಂದೆ ಕತ್ತೆಯ ಮೆರವಣಿಗೆ ಮಾಡುವುದಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾರ್ಕಳ ಉತ್ಸವ ಸಂದರ್ಭದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಹೆಲಿಕಾಪ್ಟರ್ ಹಾರಟ ನಡೆದಿದ್ದು, ಅದೇ ಸಂದರ್ಭದಲ್ಲಿ ಅಲ್ಲಿ ನೀರು ಸಿಂಪಡೆಗೆ ರೂ. 8.9 ಲಕ್ಷ ಮೊತ್ತವನ್ನು ಪುರಸಭೆ ಭರಿಸಿದೆ. ಆ ಮೊತ್ತದಲ್ಲಿ ಮಂಗಳೂರು ರಸ್ತೆಗೆ ಡಾಂಬರೀಕರಣಕ್ಕೆ ವಿನಿಯೋಗಿಸುವ ಚಿಂತನೆಯನ್ನು ಪುರಸಭೆ ನಡೆಸುತ್ತಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ ಪುರಸಭಾ ಟೀಕಿಸಿದರು. ಹಾಗೂ ಪುರಸಭಾ ಅಧ್ಯಕ್ಷೆ ಸುಮ ಕೇಶವ ಅವರು ಈ ಕುರಿತು ಹೇಳಿಕೆಯೊಂದನ್ನು ನೀಡಿ ರಸ್ತೆ ಅಭಿವೃದ್ಧಿಕಾರ್ಯವು ತಾಂತ್ರಿಕ ಪ್ರಕ್ರಿಯೆಯಲ್ಲಿ ಇದೆ ಎಂದು ಹೇಳಿದರೆ, ಆಡಳಿತ ಪಕ್ಷ ಬಿಜೆಪಿಯ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಹೇಳಿಕೆ ನೀಡಿ ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿದೆ ಎಂದಿದ್ದಾರೆ. ಈ ವಿಭಿನ್ನ ಹೇಳಿಕೆಯೂ ಯಾವುದು ಸತ್ಯ ಯಾವುದು ಮಿಥ್ಯಾ ಎಂಬ ಗೊಂದಲವನ್ನು ಸೃಷ್ಠಿಸಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಶುಭದರಾವ್, ವಿನ್ನಿಬೋಲ್ಡ್ ಮೆಂಡೋನ್ಸಾ, ಸೋಮನಾಥ, ಪುರಸಭಾ ಮಾಜಿ ಅಧ್ಯಕ್ಷರಾದ ಸೀತಾರಾಮ, ಪ್ರತಿಮಾ ರಾಣೆ, ಉದ್ಯಮಿಗಳಾದ ರಾಜೇಂದ್ರ, ಯುವ ಕಾಂಗ್ರೆಸ್ ಮುಖಂಡ ಯೋಗೀಶ್ ಇನ್ನಾ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.