ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ರ ಫಿನಾಲೆಯಲ್ಲಿ ಮಿಂಚಿದ ಕರಾವಳಿಯ ನಟ ರೂಪೇಶ್ ಶೆಟ್ಟಿ
ಬೆಂಗಳೂರು ಸೆ.17: ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ರ ಫಿನಾಲೆಯಲ್ಲಿ ಕರಾವಳಿಯ ನೆಚ್ಚಿನ ನಟ ರೂಪೇಶ್ ಶೆಟ್ಟಿ ಅವರು ಅತ್ಯಧಿಕ ಮತಗಳನ್ನು ಗಳಿಸಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ನಿನ್ನೆ ಸಂಜೆ ನಡೆದ ಅದ್ದೂರಿ ಪಿನಾಲೆಯಲ್ಲಿ ಟಾಪ್ ನಾಲ್ವರು ಸ್ಪರ್ಧಿಗಳಲ್ಲಿ ವೀಕ್ಷಕರ ಹಾರೈಕೆಯಂತೆ ರೂಪೇಶ್ ಶೆಟ್ಟಿ ಅವರು 5 ಲಕ್ಷ ರೂಪಾಯಿ ನಗದು ಬಹುಮಾನದೊಂದಿಗೆ ವಿನ್ನರ್ ಆಗಿ ಬಿಗ್ ಬಾಸ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.
ರೂಪೇಶ್ ಶೆಟ್ಟಿ ಅವರು ತಮ್ಮದೇ ರೀತಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದರು. ಸಾನ್ಯಾ ಐಯ್ಯರ್ ಜೊತೆಗೆ ಹೆಚ್ಚು ಆಪ್ತವಾಗಿದ್ದ ಅವರು, ದೊಡ್ಮನೆಯಲ್ಲಿ ಅವರು ಕಿರಿಕ್ ಮಾಡಿಕೊಂಡಿದ್ದು ಕಡಿಮೆ. ಸಾಧ್ಯವಾದಷ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ ಅವರದ್ದಾಗಿತ್ತು. ಈ ಎಲ್ಲ ಕಾರಣದಿಂದಾಗಿ ಅವರು ಜನಮನ ಗೆದ್ದಿದ್ದಾರೆ. ಹಾಗೂ ಹೆಚ್ಚು ವೋಟ್ ಪಡೆಯುವ ಮೂಲಕ ಟಾಪರ್ ಸ್ಥಾನ ಗಳಿಸಿದ್ದಾರೆ. ನಟನಾಗಿ, ಆರ್.ಜೆ ಆಗಿ, ನಿರೂಪಕನಾಗಿ ಜನಪ್ರಿಯತೆ ಪಡೆದುಕೊಂಡಿದ್ದ ಅವರು ಇದೀಗ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋಗೆ ಬಂದ ಬಳಿಕ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಕೊನೇ ವಾರದಲ್ಲಿ ವಿಶೇಷ ಟಾಸ್ಕ್ ಗಳನ್ನು ನೀಡಲಾಗಿತ್ತು. ಅವುಗಳಲ್ಲಿ ಬೆಸ್ಟ್ ಪರ್ಫಾರ್ಮೆನ್ಸ್ ನೀಡುವ ಮೂಲಕ ರೂಪೇಶ್ ಶೆಟ್ಟಿ ಅವರು ಈ ಬಹುಮಾನದ ಮೊತ್ತ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಅವರ ಜೊತೆಗೆ ರಾಕೇಶ್ ಅಡಿಗ, ಸಾನ್ಯಾ ಐಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ ಕೂಡ ಟಿವಿ ಸೀಸನ್ ಗೆ ನೇರ ಟಿಕೆಟ್ ಪಡೆದುಕೊಂಡಿದ್ದಾರೆ.
ಇದೀಗ ರೂಪೇಶ್ ಶೆಟ್ಟಿ ಅವರ ಗೆಲುವಿಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ ಹಾಗೂ ತಮ್ಮ ಸಂದೇಶಗಳೊಂದಿಗೆ ಅವರನ್ನು ಅಭಿನಂದಿಸಿದ್ದಾರೆ.