ಕೊಲ್ಲೂರು: ಅಭಯಾರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಕೊಲ್ಲೂರು ಸೆ.16(ಉಡುಪಿ ಟೈಮ್ಸ್ ವರದಿ): ಚಿತ್ತೂರು ಗ್ರಾಮದ ದ್ಯಾಸಕೇರಿ ಎಂಬಲ್ಲಿ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಸಂಜೀವ ದೇವಾಡಿಗ (48) ಎಂದು ಗುರುತಿಸಲಾಗಿದೆ.
ಸಂಜೀವ ದೇವಾಡಿಗರವರು ಕಳೆದ 10-12 ವರ್ಷಗಳಿಂದ ಮಾನಸಿಕ ಖಾಯಿಲೆ ಹಾಗೂ ಇತರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಅಪರೂಪಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ಅ.2 ರಂದು ಮನೆಗೆ ಬಂದಿದ್ದ ಅವರು ಆ.3 ರಂದು ಬೆಳಿಗ್ಗೆ ಮನೆಯಿಂದ ಹೋಗಿದ್ದು, ಬಳಿಕ ಮನೆಗೆ ವಾಪಸ್ಸು ಬಂದಿರಲಿಲ್ಲ. ಇವರನ್ನು ಅವರ ತಮ್ಮ ವಿಜಯ್ ದೇವಾಡಿಗ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ.
ನಿನ್ನೆ ಸಂಜೆ ಸ್ಥಳೀಯ ಮಹಿಳೆಯರು ಅರಣ್ಯ ಪ್ರದೇಶಕ್ಕೆ ಕಟ್ಟಿಗೆ ತರಲು ಹೋಗಿದ್ದ ವೇಳೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಮೃತರ ತಮ್ಮ ವಿಜಯ್ ದೇವಾಡಿಗ ಅವರು ಸ್ಥಳೀಯರೊಂದಿಗೆ ಕಾಡಿಗೆ ತೆರಳಿದ್ದು, ವಿಪರೀತ ಮಳೆ ಮತ್ತು ಕತ್ತಲಾಗಿರುವುದರಿಂದ ಕಾಡಿನಲ್ಲಿ ದಾರಿ ತಿಳಿಯದೇ ವಾಪಸು ಬಂದಿದ್ದರು.
ಬಳಿಕ ಇಂದು ಬೆಳಿಗ್ಗೆ ಮತ್ತೆ ಕಾಡಿಗೆ ಹೋಗಿ ಹುಡುಕಾಡುತ್ತಿದಾಗ ದ್ಯಾಸಕೇರಿ ವನ್ಯ ಜೀವಿ ವಲಯದ ಆಭಯಾರಣ್ಯದ ಕಾಲು ದಾರಿಯಲ್ಲಿ ಸಂಪೂರ್ಣ ಕೊಳೆತು ಹೋದ ಮೃತಶರೀರದ ಅಸ್ಥಿಪಂಜರ ಪತ್ತೆಯಾಗಿದೆ. ಮೃತ ಶರೀರದ ಮೈ ಮೇಲೆ ಇದ್ದ ಬಟ್ಟೆಗಳು ಮತ್ತು ಚಪ್ಪಲಿಯಿಂದ ಅದು ಸಂಜೀವ ದೇವಾಡಿಗ ಅವರದ್ದೇ ಮೃತದೇಹ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮೃತರ ತಮ್ಮ ವಿಜಯ್ ದೇವಾಡಿಗ ಅವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.