ಮಿನಿ ಸ್ಕರ್ಟ್ ನಿಷೇಧವಿದೆ ಆದರೇ ಹಿಜಾಬ್ ನಿಷೇಧ ಏಕೆ ಸುಪ್ರೀಂನಲ್ಲಿ ವಾದ
ಹೊಸದಿಲ್ಲಿ ಸೆ.16 : ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಮಿನಿ ಸ್ಕರ್ಟ್ ಧರಿಸದಂತೆ ನಿಷೇಧ ವಿಧಿಸಬಹುದು ಆದರೆ ಹಿಜಾಬ್ ನಿಷೇಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಲಾಗಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ ದಾವೆಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧೂಲಿಯಾ ಅವರಿದ್ದ ನ್ಯಾಯಪೀಠದ ಮುಂದೆ ತಮ್ಮ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಾಲ್ ಅವರು, “ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಧರ್ಮಕ್ಕೆ ಅನುಸಾರವಾಗಿ ಐಡೆಂಟಿಟಿ, ಸಂಸ್ಕøತಿ ಪ್ರದರ್ಶಿಸಲು ತಮ್ಮ ಆಯ್ಕೆಯ ದಿರಿಸು (ಹಿಜಾಬ್) ಬಳಸುವುದು ಅಭಿವ್ಯಕ್ತಿಯ ಹಕ್ಕಿನಲ್ಲಿ ಸೇರುವುದಿಲ್ಲವೇ” ಎಂಬ ಪ್ರಶ್ನಿಸಿದರು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಮಿನಿ ಸ್ಕರ್ಟ್ ಧರಿಸದಂತೆ ನಿಷೇಧ ವಿಧಿಸಬಹುದು ಆದರೆ ಸಂವಿಧಾನದ 19 (2)ನೇ ವಿಧಿ ಅನ್ವಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾರ್ವಜನಿಕ ನಡತೆ, ಸಭ್ಯತೆ ಮತ್ತು ನೈತಿಕತೆ ಆಧಾರದ ನಿಬರ್ಂಧ ಹೇರಿ ಹಿಜಾಬ್ ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮುಸ್ಲಿಂ ಮಹಿಳೆಯರು ಸಾಂಪ್ರದಾಯಿಕವಾಗಿ ಶಿಕ್ಷಣ ಸಂಸ್ಥೆಗಳಿಗೆ ಹಿಜಾಬ್ ಧರಿಸಿಕೊಂಡು ಬರುತ್ತಿದ್ದರು ಎಂದಾದರೆ ಕರ್ನಾಟಕ ಸರ್ಕಾರ ಸಂವಿಧಾನದ 19(2) ವಿಧಿಯ ಅಡಿಯಲ್ಲಿ ಹಿಜಾಬ್ ನಿಷೇಧಿಸಲು ಎಲ್ಲಿಂದ ಅಧಿಕಾರ ಪಡೆಯಿತು..? ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರವನ್ನು ವಿರೋಧಿಸಿಲ್ಲ. ಆದರೆ ಹೆಚ್ಚುವರಿಯಾಗಿ ಸಮವಸ್ತ್ರದ ಬಣ್ಣದ ಶಿರವಸ್ತ್ರವನ್ನು ಧರಿಸುತ್ತಾರೆ ಎಂದಾದರೆ ಅದನ್ನು ಹೇಗೆ ನಿಷೇಧಿಸುವುದು? ಎಂದು ಪ್ರಶ್ನಿಸಿದರು. ಇದರ ಜೊತೆಗೆ ಅಸ್ತಿತ್ವದಲ್ಲೇ ಇಲ್ಲದ “ಅರ್ಹ ಸಾರ್ವಜನಿಕ ಸ್ಥಳ” ಎಂಬ ಪರಿಕಲ್ಪನೆಯನ್ನು ಕರ್ನಾಟಕ ಹೈಕೋರ್ಟ್ ಪಡೆದದ್ದಾದರೂ ಎಲ್ಲಿಂದ ಎಂದು ಪ್ರಶ್ನಿಸಿ, ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರ ಹಿಜಾಬ್ ನಿಷೇಧಿಸುವ ಉದ್ದೇಶದಿಂದಲೇ ಈ ಸ್ಥಿತಿಯನ್ನು ಸೃಷ್ಟಿಸಲಾಯಿತು ಎಂದು ಪ್ರತಿಪಾದಿಸಿದರು. ಹಿಜಾಬ್ ನಿಷೇಧದಿಂದಾಗಿ ಶಿಕ್ಷಣ ಸಂಸ್ಥೆಗಳನ್ನು ಅರ್ಧದಿಂದಲೇ ತೊರೆಯುವವರ ಪ್ರಮಾಣ ಹೆಚ್ಚಿದೆ ಎಂದರು.