ಕೆಮ್ಮಣ್ಣು: ನೈರ್ಮಲ್ಯ ನಡಿಗೆ, ಗ್ರಾಮ ನಕ್ಷೆಯೊಂದಿಗೆ ಗುಂಪು ಚರ್ಚೆ
ಕೆಮ್ಮಣ್ಣು: ಸ್ವಚ್ಛ ಭಾರತ ನಿರ್ಮಾಣಕ್ಕೆ ಪೂರಕವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ನೈರ್ಮಲ್ಯ ಯೋಜನೆಯನ್ನು ಕಾರ್ಯಗತಗೊಳಿಸಲು ನೀಡಲಾದ ನಿರ್ದೇಶನದಂತೆ ತೋನ್ಸೆ ಗ್ರಾಮ ಪಂಚಾಯತ್ ಕೆಮ್ಮಣ್ಣಿನಲ್ಲಿ ಸೆ.14 ರಂದು ಗ್ರಾಮ ಪಂಚಾಯತ್ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರಾದ ಅರುಣ್ ಫೆರ್ನಾಂಡೀಸ್ ರವರ ಅಧ್ಯಕ್ಷತೆಯಲ್ಲಿ ಗ್ರಾಮ ನೈರ್ಮಲ್ಯ ಯೋಜನೆ ಬಗ್ಗೆ ನೈರ್ಮಲ್ಯ ನಡಿಗೆ ಮತ್ತು ಸಾಮಾಜಿಕ ನಕ್ಷೆಯ ಜೊತೆ ಗುಂಪು ಚರ್ಚೆ ಹಾಗೂ ಯೋಜನಾ ತಯಾರಿಯ ಸಭೆಯನ್ನು ನಡೆಸಲಾಯಿತು.
ಕೆಮ್ಮಣ್ಣು – ಪಡುಕುದ್ರು ಸೇತುವೆಯ ಬಳಿ ಗ್ರಾ ಪಂ ಉಪಾಧ್ಯಕ್ಷರು ಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಘೋಷಣೆಯ ಫಲಕ ಹಸ್ತಾಂತರಿಸಿ ನೈರ್ಮಲ್ಯ ನಡಿಗೆಗೆ ಚಾಲನೆ ನೀಡಿದರು. ನಡಿಗೆಯ ಬಳಿಕ ಕೆಮ್ಮಣ್ಣು ಚರ್ಚ್ ನ ಲಿಟ್ಲ್ ಫ್ಲವರ್ ಸಭಾಂಗಣದಲ್ಲಿ ಯೋಜನಾ ತಯಾರಿಯ ಬಗ್ಗೆ ಸಾಮಾಜಿಕ ನಕ್ಷೆಯನ್ನು ಬಿಡಿಸುವ ಮೂಲಕ ನೈರ್ಮಲ್ಯ ಯೋಜನೆಯ ವರದಿಗಾಗಿ ಗುಂಪು ಚರ್ಚೆಯೊಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳನ್ನು ಗುರುತಿಸಲಾಯಿತು.
ಸಭೆಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಮರ್ಪಕ ನಿರ್ವಹಣೆಯ ಮೂಲಕ ಗ್ರಾಮವನ್ನು ಸ್ವಚ್ಛವಾಗಿರಿಸುವುದು ಗ್ರಾಮ ನೈರ್ಮಲ್ಯ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಪಂಚಾಯತ್ ಕಾರ್ಯದರ್ಶಿ ದಿನಕರ್ ಅವರು ತಿಳಿಸಿ ಈ ಹಿಂದೆ ಸಲ್ಲಿಸಲಾದ ಒಣ ಕಸ ನಿರ್ವಹಣೆ ಮತ್ತು ಬೂದು ನೀರು ನಿರ್ವಹಣೆಯ ವಿಸ್ತೃತ ಯೋಜನಾ ವರದಿಗಳು ಅನುಮೋದನೆಗೊಂಡಿದ್ದು ಗ್ರಾ ಪಂ ಗೆ ಲಭ್ಯವಾಗಿರುವ ಸ್ವಚ್ಛ ಭಾರತ್ ಯೋಜನೆಯ ಅನುದಾನದಿಂದ ತ್ಯಾಜ್ಯ ಸಾಗಾಟದ ವಾಹನ ಖರೀದಿ ಮತ್ತು ಇನ್ಫಿನರೇಟರ್ ಅಳವಡಿಕೆ ಮಾಡಿಕೊಳ್ಳಲಾಗಿದೆ ಹಾಗೂ ಬೂದು ನೀರು ನಿರ್ವಹಣೆಗಾಗಿ ಲಭ್ಯವಾಗುವ ಅನುದಾನದಲ್ಲಿ ಗ್ರಾ ಪಂ ವ್ಯಾಪ್ತಿಯಲ್ಲಿ 9 ಕಡೆ ಬೂದು ನೀರಿನ ನಿರ್ವಹಣೆಯ ಸಾಮೂಹಿಕ ಸೋಕ್ ಪಿಟ್, ಕಿಚನ್ ಗಾರ್ಡನ್ ಹಾಗೂ ಮನರೇಗಾ ಯೋಜನೆಯಲ್ಲಿ ವೈಯುಕ್ತಿಕ ಸೋಕ್ ಪಿಟ್ ಗಳ ನಿರ್ಮಾಣದ ಬಗ್ಗೆ ಕ್ರಿಯಾ ಯೋಜನೆ ಸಿದ್ಧವಾಗಿರುವುದರ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಸ್ವಚ್ಛಭಾರತ್ (ಗ್ರಾಮೀಣ್) ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಸ್ಕೋಡ್ವೆಸ್ (ರಿ.) ಶಿರಸಿ ಇದರ ಸಿಬ್ಬಂದಿ – ಸಮುದಾಯ ಸಂಘಟಕರಾದ ರಂಜಿತ್ ಅವರು ಗ್ರಾಮ ನೈರ್ಮಲ್ಯ ಯೋಜನೆಯ ಬಗ್ಗೆ ಮಾಡಬೇಕಾದ ಪೂರ್ವ ಸಿದ್ದತೆಗಳ ಬಗ್ಗೆ , ಗ್ರಾಮದ ಕೆಲವು ಪ್ರದೇಶಗಳನ್ನು ಸಂದರ್ಶಿಸಿ ಸ್ಥಳ ಪರಿಶೀಲನೆ ನಡೆಸಿರುವುದಾಗಿ ತಿಳಿಸಿ , ಗ್ರಾಮ ನೈರ್ಮಲ್ಯ ಯೋಜನೆಗೆ ಪೂರಕವಾಗಿ ಗ್ರಾಮ ನಕ್ಷೆಯನ್ನು ಗ್ರಾ ಪಂ ಸದಸ್ಯರು, ಸಿಬ್ಬಂದಿಗಳು ಮತ್ತು ಸಂಜೀವಿನಿ ಸ್ವಸಹಾಯ ಒಕ್ಕೂಟದ ಕಾರ್ಯಕರ್ತರ ಸಹಕಾರದಿಂದ ರಚಿಸಿ ಸಂಪೂರ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಮೃತ ಆರೋಗ್ಯ ಅಭಿಯಾನದ ಕುರಿತು ತಾಲೂಕು ಸಂಯೋಜಕಿ ಆಶಾ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೈರ್ಮಲ್ಯ ಸಾಧಿಸಲು ಪೂರಕವಾಗಿರುವ ಅಂಶಗಳು, ಅಡೆ ತಡೆಗಳು, ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಗಳು, ಬೀಚ್ ಸ್ವಚ್ಛವಾಗಿರಿಸಲು ಸಮುದಾಯ ಶೌಚಾಲಯ – ಸ್ನಾನ ಗೃಹಗಳ ನಿರ್ಮಾಣದ ಅವಶ್ಯಕತೆ, ಗ್ರಾಮದ ಪ್ರಮುಖ ಕೆಪ್ಪ ತೋಡಿನಲ್ಲಿ ಮತ್ತು ಇತರ ಖಾಸಗಿ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಈ ಯೋಜನೆಯಲ್ಲಿ ಕೆಲವು ಪ್ರದೇಶಗಳಲ್ಲಾದರೂ ಸಿಸಿ ಟಿವಿ ಅಳವಡಿಕೆಯ ಅಗತ್ಯತೆ, ಸರಕಾರಿ ಭೂಮಿ ಲಭ್ಯವಿರದ ಕಾರಣ ಖಾಸಗಿಯವರನ್ನು ಅವಲಂಬಿಸಬೇಕಾದ ಪರಿಸ್ಥಿತಿ … ಇತ್ಯಾದಿ ವಿಷಯಗಳ ಬಗ್ಗೆ ಗುಂಪು ಚರ್ಚೆಯ ಮೂಲಕ ಚರ್ಚಿಸಲಾಯಿತು
ಗ್ರಾ ಪಂ ಸದಸ್ಯರುಗಳಾದ ಮಹೇಶ್ ಪೂಜಾರಿ, ಆಶಾ, ಪ್ರತಿಭಾ, ಯಶೋದಾ, ಮಹಮ್ಮದ್ ಇದ್ರೀಸ್, ಜಮಿಲಾ ಸದಿದಾ, ಕುಸುಮ, ಪ್ರಶಾಂತ್ ಕೆಮ್ಮಣ್ಣು, ಸಂಧ್ಯಾ, ಡಾ. ಫಹಿಮ್ ಅಬ್ದುಲ್ಲಾ, ಪುರಂದರ ಟಿ.ಕುಂದರ್, ಸುಜಾನ್ಹ ಡಿಸೋಜಾ, ವಿಜಯ್, ನಿಕಟ ಪೂರ್ವ ಅಧ್ಯಕ್ಷೆ ಫೌಜಿಯಾ ಪರ್ವಿನ್, ತಾಪಂ ಮಾಜಿ ಸದಸ್ಯೆ ಸುಲೋಚನಾ ಸತೀಶ್, ಸಂಜೀವಿನಿ ಒಕ್ಕೂಟದ ಸುಜಾತ, ಸರೋಜಾ, ರೇಖಾ, ಹೇಮಲತಾ, ಜಲಜ ಬೆಲ್ಚಾಡ್ತಿ , ಎಂಬಿಕೆ, ಎಲ್ ಸಿ ಆರ್ ಪಿ ಮತ್ತು ಇತರ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಗ್ರಾ ಪಂ ವ್ಯಾಪ್ತಿಯ ಸರಕಾರಿ ಹೈಸ್ಕೂಲ್, ಸ.ಹಿ.ಉರ್ದು ಪ್ರಾಥಮಿಕ ಶಾಲೆ, ಸಾಲಿಹಾತ್ ಶಿಕ್ಷಣ ಸಂಸ್ಥೆ, ದಾರುಸ್ಸಲ್ಲಾಂ ಸ್ಕೂಲ್, ಕಾರ್ಮೆಲ್ ಹೈಸ್ಕೂಲ್ ಗಳ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ, ನಿರ್ಮಲ್ ತೋನ್ಸೆ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಕುಂದರ್, ಮಾಜಿ ಉಪಾಧ್ಯಕ್ಷರಾದ ಉಸ್ತಾದ್ ಸಾದಿಕ್ ಮತ್ತು ಗ್ರಾಮಸ್ಥರು ನೈರ್ಮಲ್ಯ ನಡಿಗೆ -ಸಾಮಾಜಿಕ ನಕ್ಷೆ ತಯಾರಿ ಮತ್ತು ಗುಂಪು ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಮಲಾ ಸ್ವಾಗತಿಸಿದರು.
ಕೊನೆಯಲ್ಲಿ ಧನ್ಯವಾದಗಳೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.