ಉಡುಪಿ ಭಜರಂಗ್ ಬ್ಯಾಂಡ್- ವಿದ್ಯೆಗಾಗಿ ಸಹಾಯ ನಿಧಿ ಹಸ್ತಾಂತರ
ಉಡುಪಿ ಸೆ.15(ಉಡುಪಿ ಟೈಮ್ಸ್ ವರದಿ): ನಗರದಲ್ಲಿ ಗಣೇಶ ಚತುರ್ಥಿಯಂದು ವೇಷ ಧರಿಸಿ ಹಣ ಸಂಗ್ರಹಿಸಿದ ಭಜರಂಗ್ ನಾಸಿಕ್ ಬ್ಯಾಂಡ್ ಉಡುಪಿ ಇದರ ವತಿಯಿಂದ ವಿದ್ಯೆಗಾಗಿ ಸಹಾಯ ನಿಧಿ ಹಸ್ತಾಂತರ ಕಾರ್ಯಕ್ರಮ ಕಡಿಯಾಳಿಯ ಕಮಲ ಬಾಯಿ ಹೈಸ್ಕೂಲ್ ನ ರೋಟರಿ ಸ್ಕೌಟ್ ಭವನ್ ದಲ್ಲಿ ಸೆ.21 ರಂದು ಸಂಜೆ 5 ಗಂಟೆಗೆ ನಡೆಯಲಿದೆ.
ತಂಡದ ಸದಸ್ಯರು ಅ.31 ರಿಂದ ಸೆ.1 ರ ವರೆಗೆ ಗಣೇಶ ಚತುರ್ಥಿಯಂದು 2ದಿನ ವೇಷ ಧರಿಸಿ ಉಡುಪಿಯ ಆಸುಪಾಸಿನಲ್ಲಿ ತಿರುಗಿ ದಾನಿಗಳಿಂದ ಹಣ ಸಂಗ್ರಹಿಸಿದ್ದರು. ಹೀಗೆ ತಾವು ಸಂಗ್ರಹಿಸಿದ ಹಣವನ್ನು ಸಮಾಜಮುಖಿ ಕಾರ್ಯದ ಭಾಗವಾಗಿ ಸಮಾಜದಲ್ಲಿರುವ ಗಣ್ಯ ವ್ಯಕ್ತಿಗಳ ಸಮುಖದಲ್ಲಿ ಅಶಕ್ತ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೀಡಲು ನಿರ್ಧರಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳು ಸೇರಿ ಕಟ್ಟಿದ ಭಜರಂಗ ನಾಸಿಕ್ ಬ್ಯಾಂಡ್ ಉಡುಪಿ ತಂಡದ ಸಾಮಾಜಿಕ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.