ಶಾಲೆಗಳಿಗೆ ಈ ವರ್ಷ 14 ದಿನ ದಸರಾ ರಜೆ ಸಾಧ್ಯತೆ
ಬೆಂಗಳೂರು ಸೆ.14: ಸಾರ್ವಜನಿಕ ಶಿಕ್ಷಣ ಇಲಾಖೆಯ 2022-23 ನೇ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಅ.3 ರಿಂದ ಅ.16 ರ ವರೆಗೆ ದಸರಾ ರಜೆ ಇದ್ದು, ಈ ಬಾರಿ ರಾಜ್ಯದ ವಿದ್ಯಾರ್ಥಿಗಳಿಗೆ ದಸರಾಗೆ 14 ದಿನಗಳ ಕಾಲ ರಜೆ ಸಿಗುವ ಸಾಧ್ಯತೆ ಇದೆ.
ಈ ಬಗ್ಗೆ ಶಿಕ್ಷಣ ಇಲಾಖೆ ಯಾವುದೇ ಅಧಿಕೃತ ಮಾಹಿತಿ ಹೊರಡಿಸಿಲ್ಲ. ಆದರೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅಥವಾ ಅಕ್ಟೋಬರ್ ಮೊದಲನೇ ವಾರದಲ್ಲಿ ಈ ಕುರಿತ ಅಧಿಕೃತ ಪ್ರಕಟಣೆಯನ್ನು ಹೊರಡಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
2022-23ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶೈಕ್ಷಣಿಕ ವರ್ಷದ ಕ್ರಿಯಾ ಯೋಜನೆ ಮತ್ತು ಪ್ರಮುಖ ದಿನಾಂಕಗಳ ಕ್ಯಾಲೆಂಡರ್ ಅನ್ನು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
ಈ ಕ್ರಿಯಾ ಯೋಜನೆಯ ಪ್ರಕಾರವೇ ರಾಜ್ಯದಲ್ಲಿ ಮೇ. 16 ರಿಂದಲೇ ಶೈಕ್ಷಣಿಕ ವರ್ಷವನ್ನು ಆರಂಭ ಮಾಡಲಾಗಿದೆ. ಅ.2 ರಂದು ಮೊದಲನೇ ಅವಧಿಯ ಶಾಲಾ ಕರ್ತವ್ಯದ ದಿನಗಳು ಮುಗಿಯಲಿದ್ದು ಅ. 3 ರಿಂದ ಅ.16 ರ ವರೆಗೆ ದಸರಾ ರಜೆ ನೀಡಲಾಗಿದೆ.
ಅ.17 ರಿಂದ ನ. 25 ರವರೆಗೆ 4ನೇ ತರಗತಿಯಿಂದ 9ನೇ ತರಗತಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯ ನಡೆಯಲಿದೆ. ಆದ್ದರಿಂದ ವಿದ್ಯಾರ್ಥಿಗಳು ಅರ್ಧವಾರ್ಷಿಕ ಪರೀಕ್ಷೆಗೆ ಅಧ್ಯಯನ ಮಾಡಿಕೊಳ್ಳುವ ದೃಷ್ಟಿಯಿಂದ ಈ ರಜೆಯನ್ನು ಪ್ರತಿ ವರ್ಷ ನೀಡಲಾಗುತ್ತದೆ. ಒಟ್ಟು 14 ದಿನಗಳ ಕಾಲ ದಸರಾ ರಜೆಯನ್ನು ನೀಡಲಾಗುತ್ತದೆ. ಶೈಕ್ಷಣಿಕ ವರ್ಷದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಲಭ್ಯವಾಗುವ ಒಟ್ಟು ಶಾಲಾ ಕರ್ತವ್ಯದ ದಿನಗಳು 256 ಎಂದು ಕ್ಯಾಲೆಂಡರ್ ನಲ್ಲಿ ನೀಡಲಾಗಿದೆ ಎಂದು ತಿಳಿದು ಬಂದಿದೆ.