ಬಿಜೆಪಿಯನ್ನು ಹಿಂದೂಗಳು ಎಂದೂ ಕ್ಷಮಿಸಲಾರರು- ಹಿಂದೂ ಮಹಾಸಭಾ
ಮಂಗಳೂರು, ಸೆ.14: ರಾಜ್ಯ ಬಿಜೆಪಿ ಸರಕಾರವು ಬಿಲ್ಲವ ಸಮುದಾಯವನ್ನು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ನಿರಂತರವಾಗಿ ಅವಮಾನ ಮಾಡುತ್ತಾ ಬಂದಿದೆ. ಹಾಗಾಗಿ ಬಿಜೆಪಿಯನ್ನು ಹಿಂದೂಗಳು ಎಂದೂ ಕ್ಷಮಿಸಲಾರರು ಎಂದು ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿಯ ಅನುಪಸ್ಥಿತಿಯಲ್ಲಿ ಕೇವಲ ದ.ಕ. ಜಿಲ್ಲೆಗೆ ಸೀಮಿತಗೊಳಿಸಿ ಗುರುಗಳಿಗೆ ಅವಮಾನ ಮಾಡಲಾಗಿದೆ. ನಾರಾಯಣ ಗುರುಗಳ ಜನ್ಮದಿನವನ್ನು ಮುಖ್ಯಮಂತ್ರಿಯ ಉಪಸ್ಥಿತಿಯಲ್ಲಿ ಆಚರಿಸಬೇಕಿತ್ತು. ಅಲ್ಲದೆ ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಕ್ಯಾಬಿನೆಟ್ ಸಚಿವರ ಜೊತೆ ಡ್ಯಾನ್ಸ್ ಮಾಡಿರುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಗಣರಾಜ್ಯೋತ್ಸವದ ಪರೇಡ್ ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಿಸಿರುವುದು ಹಾಗೂ ಇತ್ತೀಚೆಗೆ ರಾಜ್ಯ ಸರಕಾರ ಸಮಾಜ ವಿಜ್ಞಾನ ಪಠ್ಯದಿಂದ ನಾರಾಯಣ ಗುರುಗಳ ಪಠ್ಯವನ್ನು ಕೈ ಬಿಟ್ಟಿರುವುದು ಬಿಲ್ಲವ ಸಮುದಾಯವನ್ನು ಕಡೆಗೆನಿಸಿರುವುದಕ್ಕೆ ಸಾಕ್ಷಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಹಿಂದೂ ಮಹಾಸಭಾದ ನೇತೃತ್ವದಲ್ಲಿ ಬಿಜೆಪಿಗೆ ತಕ್ಕ ಉತ್ತರ ಕೊಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.