ಉಡುಪಿ: ಅನಾಥ ಶವಗಳ ವಿಲೇವಾರಿಗೆ ಸಮಾಜ ಸೇವಕರೊಂದಿಗೆ ಹೆಗಲು ಕೊಟ್ಟ ನ್ಯಾಯಾಧೀಶೆ!

ಉಡುಪಿ, ಸೆ.13: ಉಡುಪಿ ಜಿಲ್ಲೆಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಅವರು ವಾರಿಸುದಾರರಿಲ್ಲದ ಅನಾಥ ಶವಗಳ ವಿಲೇವಾರಿಗೆ ಸಮಾಜ ಸೇವಕರೊಂದಿಗೆ ಕೈಜೋಡಿಸಿ ಮಾನವೀಯತೆ ಮೆರೆದಿದ್ದಾರೆ.

ಅವಧಿ ಮುಗಿದ ನಂತರ ಉಡುಪಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಶವಗಳು ಹಾಗೆಯೇ ಬಾಕಿ ಉಳಿಯುತ್ತಿತ್ತು. ಇದರ ವಿಲೇವಾರಿಯು ಪೊಲೀಸ್ ಇಲಾಖೆಗೆ ದೊಡ್ಡ ಸಮಸ್ಯೆಯಾಗಿತ್ತು. ಬಳಿಕ ಅನೇಕ ಸಂದರ್ಭದಲ್ಲಿ ಸಮಾಜಸೇವಕರ ನೆರವಿನೊಂದಿಗೆ ಅನಾಥ ಶವಗಳನ್ನು ವಿಲೇವಾರಿ ಮಾಲಾಗುತ್ತಿತ್ತು. ಇದೀಗ ಇಂತಹ ಪುಣ್ಯ ಕಾರ್ಯದಲ್ಲಿ ನ್ಯಾಯಾಧೀಶೆ ಶರ್ಮಿಳಾ ಅವರು ಕೈಜೋಡಿಸಿದ್ದು, ಉಡುಪಿ ನಗರದ ಬೀಡಿನಗುಡ್ಡೆ ಭಾಗದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನಾಗರಿಕ ಸಮಿತಿ ಹಾಗೂ ಕಾನೂನು ಸೇವೆ ಪ್ರಾಧಿಕಾರದಿಂದ ನಡೆದ ನಾಲ್ಕು ಅನಾಥ ಶವಗಳ ಅಂತ್ಯಸಂಸ್ಕಾರದ ವೇಳೆ ಸ್ವತಹ ಭಾಗವಹಿಸಿ ಮೂಡನಂಬಿಕೆಗಳನ್ನು ಹೋಗಲಾಡಿಸುವುದರ ಜೊತೆಗೆ ಜಾಗೃತಿ ಮೂಡಿಸಿದ್ದಾರೆ.

ತಮ್ಮ ಕಾರ್ಯದ ಬಗ್ಗೆ ಮಾತನಾಡಿರುವ ನ್ಯಾಯಾಧೀಶೆ ಶರ್ಮಿಳಾ ಅವರು, ರುದ್ರ ಭೂಮಿಗೆ ಮಹಿಳೆಯರು ಹೋಗಬಾರದೆಂಬ ಕಟ್ಟುಪಾಡು ಕೇವಲ ಮೂಢನಂಬಿಕೆ. ಯಾರೂ ಇಂಥ ಸ್ಥಳಗಳಿಗೆ ಬರಲು ಹೆದರಬಾರದು. ಅನಾಥ ಶವಗಳಿಗೆ ಸಾರ್ವಜನಿಕರೂ ಹೆಗಲು ಕೊಡುವ ಮೂಲಕ ಯಾರೂ ಅನಾಥರಲ್ಲ ಎಂಬ ಜಾಗೃತಿ ಮೂಡಬೇಕು. ಮಹಿಳೆಯಾಗಿ ನಾನೇ ಈ ಸ್ಥಳಕ್ಕೆ ಬಂದು ಶವಗಳಿಗೆ ಹೆಗಲು ಕೊಟ್ಟಿದ್ದೇನೆ. ಹೀಗಾಗಿ ಎಲ್ಲರೂ ಅನಾಥ ಶವದ ಅಂತ್ಯ ಕ್ರಿಯೆಯಲ್ಲೂ ತೊಡಗುವ ಮೂಲಕ ಸಾಮಾಜಿಕ ಕಾರ್ಯ ಮೆರೆಯಬೇಕು ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಸಮಾಜ ಸೇವಕ ನಿತ್ಯಾನಂದ ಒಳಕಡು ಅವರು, ನಾಲ್ಕು ಶವಗಳಿಗೆ ತಾನೂ ಹೆಗಲು ಕೊಟ್ಟ ನ್ಯಾಯಾಧೀಶೆಯ ನಡೆ ಒಂದು ಕ್ರಾಂತಿಕಾರಿ ನಿರ್ಧಾರ. ಮಹಿಳಾ ನ್ಯಾಯಾದೀಶೆಯ ಈ ನಡೆ ಸಮಾಜಕ್ಕೆ ಮಾದರಿ.ಇಂತಹ ಸ್ಥಳಕ್ಕೆ ಮಹಿಳೆಯರು ಬರುವುದಿಲ್ಲ. ನ್ಯಾಯಾದೀಶೆ ಈ ಕಾರ್ಯ ಮಾಡಿರುವುದರಿಂದ ಇನ್ನುಮುಂದೆ ಮಹಿಳೆಯರು ಬರುವ ಮನಸ್ಸು ಮಾಡಬೇಕು ಎಂದಿದ್ದಾರೆ.

ಸದ್ಯ  ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ. 

Leave a Reply

Your email address will not be published. Required fields are marked *

error: Content is protected !!