ಉಡುಪಿ: ಸೆ.11- ಬಡಗಬೆಟ್ಟು ಕ್ರೆಡಿಟ್ ಕೋ-ಆ. ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆ
ಉಡುಪಿ ಸೆ.10(ಉಡುಪಿ ಟೈಮ್ಸ್ ವರದಿ): ಶತಮಾನೋತ್ಸವವನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯಸಭೆಯು ಸೆ.11 ರಂದು ಅಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಜಯಕರ ಶೆಟ್ಟಿ ಇಂದ್ರಾಳಿ ಅವರು ತಿಳಿಸಿದರು.
ನಾಳೆ ನಡೆಯಲಿರುವ ವಾರ್ಷಿಕ ಮಹಾ ಸಭೆಯ ಪೂರ್ವ ಭಾವಿಯಾಗಿ ಇಂದು ಉಡುಪಿಯ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು, ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ರವರ ಅಧ್ಯಕ್ಷತೆಯಲ್ಲಿ ವಾರ್ಷಿ ಮಹಾ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಸಂಘದ ಸಮಾಜ ಮುಖಿ ಕಾರ್ಯದ ಭಾಗವಾಗಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಪೂಣಾರ್ಂಕ ಪಡೆದು ತೇರ್ಗಡೆ ಹೊಂದಿದ ಸದಸ್ಯರ ಮಕ್ಕಳನ್ನು ಮತ್ತು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣ ಹೊಂದಿದ ಸಿಬ್ಬಂದಿಗಳ ಮಕ್ಕಳನ್ನು ಸಂಘದ ವತಿಯಿಂದ ಸಮ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಆರಂಭಗೊಂಡಿದ್ದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಇಂದು ಜಿಲ್ಲಾ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸದ್ಯ 10 ಶಾಖೆಗಳನ್ನು ಸಂಘ ಹೊಂದಿದ್ದು 9 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ ಸಂಘದ ಸಮಾಜಮುಖಿ ಕಾರ್ಯದ ಅಂಗವಾಗಿ ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದ ಬಳಿ 1 ಎಕರೆ ಜಾಗದಲ್ಲಿ ಸಹಕಾರ ಸೌಧ ಎಂಬ ಕಟ್ಟಡ ನಿರ್ಮಾಣ ಮಾಡಿ ಸಾರ್ವಜನಿಕ ಉಪಯೋಗಕ್ಕೆ ನೀಡುವ ಉದ್ದೇಶ ಹೊಂದಿದ್ದೇವೆ. ಇದಕ್ಕಾಗಿ ಈಗಾಗಲೇ ಜಾಗ ನಿಗದಿಯಾಗಿದೆ. 7 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಟಡ ನಿಮಾರ್ಣಗೊಳ್ಳಲಿದ್ದು, ಈ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ. ಸದ್ಯ ಈ ಕಟ್ಟಡ ನಿರ್ಮಾಣಕ್ಕೆ ನಗರ ಸಭೆಯ ಅನುಮತಿಗಾಗಿ ಪ್ರಸ್ತಾವಣೆ ನೀಡಲಾಗಿದೆ ಎಂದು ತಿಳಿಸಿದರು.
19118 ರಲ್ಲಿ ಸ್ಥಾಪನೆಯಾದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಇಂದು ಸತತವಾಗಿ 2 ಬಾರಿ ಕೇಂದ್ರ ಸರಕಾರದಿಂದ ನೀಡಲ್ಪಡುವ ರಾಷ್ಟ್ರಮಟ್ಟದ ಎನ್.ಸಿ.ಡಿ.ಸಿ ಪ್ರಶಸ್ತಿ, 7 ಬಾರಿ ಕರ್ನಾಟಕ ರಾಜ್ಯದ ಸಹಕಾರ ಪ್ರಶಸ್ತಿ, 16 ಬಾರಿ ಅವಿಭಜಿತ ದ.ಕ ಜಿಲ್ಲಾ ಪ್ರಶಸ್ತಿಗಳನ್ನು ಪಡೆದ ರಾಜ್ಯದ ಏಕೈಕ ಕ್ರೆಡಿಟ್ ಸೊಸೈಟಿಯಾಗಿ ಗುರುತಿಸಿ ಕೊಂಡಿದೆ. ಸಂಘವು ತನ್ನ ಸಾಮಾಜಿಕ ಕಾಳಜಿಯುಳ್ಳ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ವಿಭಿನ್ನ ಛಾಪು ಮೂಡಿಸಿ ರಾಜ್ಯದಲ್ಲಿಯೇ ಸಹಕಾರಿ ರಂಗದ ಮಾದರಿ ಸಹಕಾರ ಸಂಘಗಳಲ್ಲೊಂದಾಗಿದೆ ಎಂದು ಹೇಳಿದರು.
ಶತಮಾನೋತ್ಸವಕ್ಕೆ ಸುಮಾರು ರೂ.1.40 ಕೋಟಿಗೂ ಅಧಿಕ ವೆಚ್ಚದಲ್ಲಿ ನೂರಾರು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ ಹಿರಿಮೆಯನ್ನು ಹೊಂದಿರುವ ಈ ಸಂಸ್ಥೆಯು, ಕೊರೋನಾ ಮಹಾಮಾರಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ವೈರಸ್ ಹಾವಳಿಯನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ಹೊಂದಿರುವ ಮಾಹಿತಿ ಪತ್ರವನ್ನು ಸಂಘದ ಎಲ್ಲಾ ಶಾಖೆಗಳಲ್ಲಿ ಸದಸ್ಯರಿಗೆ, ಗ್ರಾಹಕರಿಗೆ ವಿತರಿಸಲಾಗಿತ್ತು. ಹಾಗೂ ಜನಜಾಗೃತಿಯ ಬ್ಯಾನರ್ ಮುದ್ರಿಸಿ ಪ್ರಕಟಿಸಲಾಗಿತ್ತು. ಇದರ ಜೊತೆಗೆ ಸಾರ್ವಜನಿಕರಿಗೆ ಹಾಗೂ ಉಡುಪಿ ಜಿಲ್ಲೆಯ ನಗರಸಭೆಯ ಪೌರಕಾರ್ಮಿಕರಿಗೆ ಬಳಸಲು ಉತ್ತಮ ಗುಣಮಟ್ಟದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ನೀಡಲಾಗಿದೆ. ಇದರ ಜೊತೆಗೆ ಸಂಘದ ಕಾರ್ಯಕ್ಷೇತ್ರದಲ್ಲಿ ವಾಸಮಾಡಿಕೊಂಡಿರುವ ಯಾವುದೇ ಪಡಿತರ ಚೀಟಿ ಸೌಲಭ್ಯ ಇಲ್ಲದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಸದಸ್ಯರಿಗೆ, ವಲಸೆ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ ದಿನ ಬಳಕೆಯ ಸಾಮಾಗ್ರಿಗಳನ್ನು (ಅಕ್ಕಿ, ಸಕ್ಕರೆ, ಧವಸ ಧಾನ್ಯ, ಎಣ್ಣೆ, ಬಿಸ್ಕತ್ತು ಇತ್ಯಾದಿ) ವಿತರಿಸಿದ್ದು, ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ವಿತರಿಸಲಾಗಿದೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ವೈದ್ಯಕೀಯ ನೆರವಾಗಲೆಂದು ಸಂಘದ ಪ್ರಾಯೋಜಕತ್ವದಲ್ಲಿ ಉಡುಪಿಯ ಹೆಸರಾಂತ ಲಂಬಾರ್ಡ್ ಮೆಮೋರಿಯಲ್’ (ಮಿಷನ್) ಆಸ್ಪತ್ರೆಗೆ ಸುಮಾರು ರೂ.1.00ಲಕ್ಷ ಮೌಲ್ಯದ ಐ.ಸಿ.ಯು ವೆಂಟಿಲೇಟನ್ನು ಕೊಡುಗೆಯಾಗಿ ನೀಡಿದ್ದು, ಸಾರ್ವಜನಿಕರಿಗೆ ಉಚಿತ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿರುತ್ತದೆ. ಕೋವಿಡ್-19 2ನೇ ಅಲೆ ಲಾಕ್ ಡೌನ್ ಆರ್ಥಿಕ ಸಂಕಷ್ಟದ ಸಮಯದಲ್ಲಿ ಸಂಘದ ದೈನಿಕ ಠೇವಣಿ ಸಂಗ್ರಾಹಕರಿಗೆ ಹಾಗೂ ಕಛೇರಿ ಶುಚಿತ್ವಗೊಳಿಸುವ ಕೆಲಸ ನಿರ್ವಹಿಸುವವರಿಗೆ ಸಹಾಯಧನವನ್ನೂ ವಿತರಿಸಲಾಗಿರುತ್ತದೆ.
ಕೋವಿಡ್ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ.5ಲಕ್ಷ ದೇಣಿಗೆ ನೀಡಿದ ಹಿರಿಮೆ ಈ ಸಂಘದ್ದಾಗಿರುತ್ತದೆ. ಸಂಸ್ಥೆಯು ಕೇವಲ ವ್ಯವಹಾರ ಮಾಡಿ ಲಾಭ ಗಳಿಸುವ ದೃಷ್ಟಿಯನ್ನು ಮಾತ್ರ ಇಟ್ಟುಕೊಳ್ಳದೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಮತ್ತು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಾರ್ಷಿಕ ಸುಮಾರು ರೂ. 15 ಲಕ್ಷದಷ್ಟು ಶಿಕ್ಷಣದ ,ಆರೋಗ್ಯದ ಬಗ್ಗೆ, ಸಾಮಾಜಿಕ ಕಾರ್ಯಕ್ರಮಗಳಿಗೆ ದೇಣಿಗೆಯನ್ನು ನೀಡುತ್ತಾ ಬಂದಿರುತ್ತದೆ ಎಂದು ಹೇಳಿದರು. ಸಂಘವು ಕೇವಲ ಬ್ಯಾಂಕಿಂಗ್ ವ್ಯವಹಾರ ಮಾಡಿ ಲಾಭಗಳಿಸುವ ದೃಷ್ಟಿಯನ್ನು ಇಟ್ಟುಕೊಳ್ಳದೇ ಸಹಕಾರ ಸಂಘಗಳ ಪೈಕಿ ವಿಶಿಷ್ಟ ಮತ್ತು ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ಸದಸ್ಯರಿಗೆ, ಗ್ರಾಹಕರಿಗೆ ನೆರವಾಗುವ ಪರಂಪರೆಯನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಕೊರೋನಾ ಸಂಕಷ್ಟದ ಸಮಯದಲ್ಲಿಯೂ ನಿರಂತರವಾಗಿ ಸದಸ್ಯ ಗ್ರಾಹಕರಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಕಲ್ಪಿಸಲಾಗಿರುತ್ತದೆ.
ಸಂಘದ ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ಸೇವೆ ನೀಡುವ ಸಲುವಾಗಿ ಈಗಾಗಲೇ ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್ ಕಾರ್ಡ್, ನೆಫ್ಟ್, ಆರ್ಟಿಜಿಎಸ್, ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್ಫರ್, ರಿಯಾ ಮನಿ ಟ್ರಾನ್ಸ್ಫರ್, ಐಎಂಪಿಎಸ್ ಸಿಸ್ಟಮ್ ಮುಖಾಂತರ ತ್ವರಿತವಾಗಿ ದೇಶವ್ಯಾಪಿ ಹಣ ರವಾನೆ ಮಾಡುವ ವ್ಯವಸ್ಥೆ, ವರ್ಚುಯಲ್ ಪೇಮೆಂಟ್, ಹೋಸ್ಟ್ ಟು ಹೋಸ್ಟ್, ಲಂಬಾರ್ಡ್ ಆರೋಗ್ಯ ಕಾರ್ಡ್, ಮಣಿಪಾಲ ಆರೋಗ್ಯ ಕಾರ್ಡ್, ಎಸ್ ಎಮ್ ಎಸ್ ಮುಖಾಂತರ ಸಂದೇಶ ರವಾನಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಹಾಗೂ ಭಾರತೀಯ ಜೀವ ವಿಮಾ ನಿಗಮದ ಭಾಗ್ಯಲಕ್ಷ್ಮಿ ಮೈಕ್ರೋ ಇನ್ಶೂರೆನ್ಸ್ ಜೀವವಿಮಾ ಪಾಲಿಸಿ ಹಾಗೂ ವಾಹನ, ಆಸ್ತಿ, ಆರೋಗ್ಯ ವಿಮಾ ಪಾಲಿಸಿ, ಸದಸ್ಯರಿಗೆ ಉಳಿತಾಯ ಖಾತೆಯ ಬ್ಯಾಲೆನ್ಸ್ ತಿಳಿಯಲು ಮಿಸ್ಡ್ ಕಾಲ್ ಸರ್ವಿಸ್, ಎಸ್.ಎಂ.ಎಸ್ ಸೌಲಭ್ಯ ಅಳವಡಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಲ್. ಉಮಾನಾಥ್, ಸಂಘದ ಪ್ರಧಾನ ವ್ಯವಸ್ಥಾಪಕ (ಪ್ರಭಾರ) ರಾಜೇಶ್ ಶೇರಿಗಾರ್ ಅವರು ಉಪಸ್ಥಿತರಿದ್ದರು.