ಉಡುಪಿ ನಗರದಲ್ಲಿ ಬೆಳ್ಳಂಬೆಳಗ್ಗೆ ವ್ಯಕ್ತಿಯ ಅಪಹರಣ- ಬೆಚ್ಚಿಬಿದ್ದ ಜನತೆ
ಉಡುಪಿ ಸೆ.10(ಉಡುಪಿ ಟೈಮ್ಸ್ ವರದಿ) ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಿಂದ ತಪ್ಪಿಸಿಕೊಂಡು ಉಡುಪಿಗೆ ಬಂದಿದ್ದ ರೋಗಿಯನ್ನು ಇನ್ನೊವಾ ಕಾರಿನಲ್ಲಿ ಬಂದ ನಾಲ್ವರ ತಂಡ ಅಪಹರಿಸಿದ ಘಟನೆ ಉಡುಪಿ ರಥಬೀದಿ ಕನಕದಾಸ ರಸ್ತೆಯಲ್ಲಿ ನಡೆದಿದೆ.
ಯೋಗೀಶ್ ಭಟ್ (54) ಬೆಂಗಳೂರಿನ ಆಸ್ಪತ್ರೆಯಿಂದ ತಪ್ಪಿಸಿಕೊಂಡವರು.
ಸೆ.8 ರಂದು ಇವರು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಉಡುಪಿಯ ಎಂಜಿಎಂ ಸಮೀಪದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು.
ಬಳಿಕ ಅಲ್ಲಿಂದಲೂ ಅವರು ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ. ಬಳಿಕ ಯೋಗೀಶ್ ಭಟ್ ಅವರ ಮುಂಬೈಯ ಬಾವನಿಗೆ ಇವರು ಉಡುಪಿಯಲ್ಲಿರುವ ಮಾಹಿತಿಯಂತೆ ಬೆಂಗಳೂರಿನಿಂದ ಬಂದ ಇನ್ನೊವಾ ಕಾರಿನಲ್ಲಿದ್ದ ನಾಲ್ವರ ತಂಡವು ಯೋಗೀಶ್ ಅವರನ್ನು ಕನಕದಾಸ ರಸ್ತೆಯಲ್ಲಿ ಬಲಾತ್ಕಾರವಾಗಿ ಇಂದು ಅಪಹರಿಸಿದ್ದರು.
ಈ ಅಪಹರಣ ನೋಡಿದ ಸ್ಥಳೀಯರು ಉಡುಪಿ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಉಡುಪಿ ಪೊಲೀಸರು ಇನ್ನೋವಾ ಕಾರಿನ ಮಾಹಿತಿ ಕಲೆ ಹಾಕಿದರು. ಕಾರು ಕಲ್ಸಂಕ ಜಂಕ್ಷನ್ ನಿಂದ ಕರಾವಳಿ ಬೈಪಾಸ್, ಹೆಜಮಾಡಿ ಟೋಲ್ ಗೇಟ್ ಪಾಸ್ ಆದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದೀಗ ಮಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ರೋಗಿಯನ್ನು ಬಲತ್ಕಾರದಿಂದ ಕೊಂಡಯ್ಯುದ್ದ KA04 ನೋಂದಣಿಯ ಇನೋವಾ ಕಾರನ್ನು ಪತ್ತೆಹಚ್ಚಿ ರೋಗಿಯನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.