ಆನ್ ಲೈನ್ ಸಾಲದ ಆ್ಯಪ್ ನ ಬೆದರಿಕೆ- ದಂಪತಿ ಆತ್ಮಹತ್ಯೆ
ಹೈದರಾಬಾದ್ ಸೆ.9: ಆನ್ ಲೈನ್ ಸಾಲದ ಆ್ಯಪ್ ನ ಬೆದರಿಕೆಯಿಂದ ಬೇಸತ್ತು ಪುತ್ರಿಯ ಜನ್ಮದಿನದಂದೇ ದಂಪತಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಕೊಲ್ಲಿ ದುರ್ಗಾರಾವ್ ಹಾಗೂ ಪತ್ನಿ ರಮ್ಯಾ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡವರು.
ದುರ್ಗಾರಾವ್ ಅವರು ಪೈಂಟರ್ ಆಗಿ ಹಾಗೂ ರಮ್ಯಾ ಲಕ್ಷ್ಮೀ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಹಣಕಾಸಿನ ತೊಂದರೆಯಾಯಿತೆಂದು ದಂಪತಿಗಳು 2 ಲೋನ್ ಆ್ಯಪ್ ನಿಂದ ಸಾಲ ಪಡೆದುಕೊಂಡಿದ್ದರು. ಆದರೆ, ಸಕಾಲಕ್ಕೆ ಹಣ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆ್ಯಪ್ ನವರು ಹಣ ನೀಡುವಂತೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಹಣ ಮರುಪಾವತಿ ಮಾಡದಿದ್ದರೆ, ರಮ್ಯಾ ಲಕ್ಷ್ಮೀ ಅವರ ಫೋಟೋವನ್ನು ಅಶ್ಲೀಲವಾಗಿ ಮಾರ್ಫ್ (ಎಡಿಟ್) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಇದರಿಂದ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಗಾಬರಿಗೊಂಡ ದಂಪತಿ ಗೋದಾವರಿ ಜಿಲ್ಲೆಯ ಮೊಗಲ್ಟೂರಿಗೆ ತೆರಳಿ ಹೊಟೇಲ್ ವೊಂದರಲ್ಲಿ ತಂಗಿ, ಸಂಬಂಧಿಕರಿಗೆ ಕರೆ ಮಾಡಿ, ತಮ್ಮ ಮಕ್ಕಳನ್ನು ನೋಡಿಕೊಳ್ಳುವಂತೆ ಮನವಿ ಮಾಡಿದ್ದು, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್ಎಸ್ಆರ್ ಸೆಕ್ಟರ್- 4, ಬೆಂಗಳೂರು.