ಆತ್ಮಹತ್ಯೆ ಸುದ್ದಿಗಳ ವೈಭವೀಕರಣ ಸಲ್ಲದು- ಮನೋ ವೈದ್ಯ ಡಾ.ಪಿ.ವಿ ಭಂಡಾರಿ

ಉಡುಪಿ ಸೆ.9 (ಉಡುಪಿ ಟೈಮ್ಸ್ ವರದಿ): ಮಾಧ್ಯಮಗಳಲ್ಲಿ ಆತ್ಮಹತ್ಯೆಯ ಬಗ್ಗೆ ಹೆಚ್ಚು ಹೆಚ್ಚು ಸುದ್ದಿಗಳನ್ನು ಪದೇ ಪದೇ ತೋರಿಸುವುದು ಹಾಗೂ ಆತ್ಮಹತ್ಯೆ ಮಾಡಿಕೊಂಡ ಬಗೆಯನ್ನು ವೈಭವೀಕರಿಸುವುದನ್ನು ಕಡಿಮೆ ಮಾಡಿ ಇದರ ಬದಲು ಆತ್ಮಹತ್ಯೆಯ ಬಗ್ಗೆ ಮಾಹಿತಿ ನೀಡುವ ಜೊತೆಗೆ ಆತ್ಮಹತ್ಯೆ ನಿಯಂತ್ರಣಕ್ಕಿರುವ ಸಹಾಯವಾಣಿಗಳ ಬಗ್ಗೆಯೂ ಮಾಹಿತಿ ನೀಡಿದರೆ ಉತ್ತಮ ವಾಗಿರುತ್ತದೆ ಎಂದು ಖ್ಯಾತ ಮನೋ ವೈದ್ಯ ಡಾ.ಪಿ.ವಿ ಭಂಡಾರಿ ಅವರು ಸಲಹೆ ನೀಡಿದ್ದಾರೆ.

ಇಂದು ಭಾರತೀಯ ಮನೋವೈದ್ಯರ ಸೊಸೈಟಿ ಕರ್ನಾಟಕ ಶಾಖೆ ಮತ್ತು ಉಡುಪಿ ಹಾಗೂ ಮಂಗಳೂರು ಮನೋವೈದ್ಯರ ಸೊಸೈಟಿ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಸಹಕಾರದೊಂದಿಗೆ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಆಯೋಜಿಸಿದ್ದ “ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ” ಕುರಿತಾಗಿ ಪತ್ರಕರ್ತರಿಗೆ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಉಡುಪಿ ಟೈಮ್ಸ್” ವೆಬ್‍ಸೈಟ್ ನಲ್ಲಿ ವರದಿಯಾಗುವ ಆತ್ಮಹತ್ಯಾ ಪ್ರಕರಣಗಳ ಸುದ್ದಿಯ ಜೊತೆಗೆ ಆತ್ಮಹತ್ಯಾ ನಿಯಂತ್ರಣಕ್ಕೆ ಲಭ್ಯವಿರುವ ಸಹಾಯವಾಣಿಗಳ ಬಗ್ಗೆಯೂ ಮಾಹಿತಿ ನೀಡುತ್ತಿರುವುದು ಉತ್ತಮವಾದ ಕೆಲಸ ಇದೇ ರೀತಿ ಪ್ರತಿಯೊಂದು ಮಾಧ್ಯಮವೂ ಮಾಡಿದರೆ ಆತ್ಮಹತ್ಯಾ ನಿಯಂತ್ರಣಕ್ಕೆ ಒಂದು ರೀತಿಯಲ್ಲಿ ಸಹಕಾರ ನೀಡಿದಂತಾಗುತ್ತದೆ. ಯಾರಾದರು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯಲ್ಲಿ ಇದ್ದಾರೆ ಎಂದು ತಿಳಿಸಿದರೆ ಅವರ ಸಮಸ್ಯೆಯನ್ನು ಕೇಳಿ, ಅವರಿಗೆ ಸಾಧ್ಯವಾದರೆ ಸಹಕಾರ ನೀಡಿ, ಅಗತ್ಯವಿದ್ದರೆ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಹೀಗೆ ಮಾಡಿದರೆ ಸಾಕಷ್ಟು ಬದಲಾವಣೆ ತರಬಹುದು ಎಂದು ತಿಳಿಸಿದರು.

ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ ಸರಕಾರ ಈವರೆಗೆ ಆತ್ಮಹತ್ಯೆ ತಡೆಗೆ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರದಿರುವುದು ಖೇದಕರ. ಆತ್ಮಹತ್ಯೆಗೆ ಕಾರಣವಾಗಿರುವ ಮಾನಸಿಕ ಕಾಯಿಲೆ ಹಾಗೂ ಮದ್ಯ ವ್ಯಸನಕ್ಕೆ ಸಂಬಂಧಿಸಿ ಎಲ್ಲ ಜಿಲ್ಲೆಗಳಲ್ಲಿಯೂ ಸರಿಯಾದ ಚಿಕಿತ್ಸೆ ಸಿಗುವಂತಾಗ ಬೇಕು. ಈ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗ ಬೇಕು. ಆಗ ಮಾತ್ರ ಆತ್ಮಹತ್ಯೆಯನ್ನು ತಡೆಯಲು ಸಾಧ್ಯವಾಗುತ್ತದೆ. ಹಾಗೂ 15 -40 ವರ್ಷದದವರು ಆತ್ಮಹತ್ಯೆ ಮಾಡಿಕೊಳ್ಳುವುದು ದೇಶದ ಮೇಲೆ ಸಾಮಾಜಿಕ, ಆರ್ಥಿಕ, ಭಾವನಾತ್ಮಕ ಹೊರೆ ಆಗುತ್ತದೆ. ಈ ಬಗ್ಗೆ ಗಂಭೀರವಾಗಿ ಚಿಂತನೆ ಆಗಬೇಕು ಸರಕಾರ ಮುಂದೊಂದು ದಿನ ಆತ್ಮಹತ್ಯೆ ತಡೆಗೆ ರಾಷ್ಟ್ರೀಯ ನೀತಿಯನ್ನು ಜಾರಿ ಮಾಡುವ ಜೊತೆಗೆ ಮಾನಸಿಕ ಚಿಕಿತ್ಸೆಯನ್ನು ಸದೃಢಗೊಳಿಸುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಪ್ರತೀ ವರ್ಷ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 28ಲಕ್ಷ ಮಂದಿ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಇಂದು ಸರಕಾರಿ ಶಾಲೆಗಳು ಕೂಡ ಶೇ.100 ಫಲಿತಾಂಶದ ಹಿಂದೆ ಹೋಗುತ್ತಿದೆ. ಇದರಿಂದ ಮಕ್ಕಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಸ್ಪರ್ಧೆ, ಹೋಲಿಕೆ, ಹೆಚ್ಚಿನ ನಿರೀಕ್ಷೆ, ಪರೀಕ್ಷೆ ಅನುತ್ರ್ತೀ, ರ್ಯಾಗಿಂಗ್, ಪ್ರೇಮ ವೈಫಲ್ಯ, ಗಂಭೀರ ಕಾಯಿಲೆಗಳು, ಖಿನ್ನತೆ , ಮನೆಯಲ್ಲಿ ಪೋಷಕರ ನಿರೀಕ್ಷೆ, ಪೋಷಕರ ನಡುವೆ ಗಲಾಟೆಗಳು, ವಯೋ ಸಹಜ ಸಮಸ್ಯೆಗಳಿಂದಾಗಿ ಪ್ರತಿದಿನ 28 ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಮಕ್ಕಳಲ್ಲಿ ಆತ್ಮಹತ್ಯೆಯನ್ನು ನಿವಾರಿಸಬೇಕಾದರೆ ಮೊದಲು ನಾವು ಕುಟುಂಬಗಳನ್ನು ಕಟ್ಟುವ ಕೆಲಸ ಆಗಬೇಕು, ಕುಟುಂಬದಲ್ಲಿ ಬದಲಾವಣೆಗಳು ಆಗಬೇಕು. ನಮ್ಮ ಕುಟುಂಬ ಬಾಂಧವ್ಯಗಳು ಉತ್ತಮವಾಗಿರಬೇಕು. ಕುಟುಂಬದ ಜೊತೆಗಿನ ಸಂಪರ್ಕ ಉತ್ತಮವಾಗಿರಬೇಕು. ಕುಟುಂಬದ ಬಗ್ಗೆ ಅಕ್ಕರೆ, ಕಾಳಜಿ, ಉತ್ತಮ ಬಾಂಧವ್ಯ ಇರುವವರು ಆತ್ಮಹತ್ಯೆ ಕಡಿಮೆ ಮಾಡುತ್ತಾರೆ ಎಂದರು.

ಮನೋವೈದ್ಯರ ಬಳಿ ಹೋಗುವುದು ಹುಚ್ಚರು ಎಂಬ ಯೋಚನೆಯನ್ನು ಮೊದಲು ತೆಗೆದುಹಾಕಬೇಕು. ಈ ನಿಟ್ಟಿನಲ್ಲಿ ಇನ್ನೊಬ್ಬರಿಂದ ಸಹಾಯ, ಸಹಕಾರ ಪಡೆಯುವುದು ದುರ್ಬಲತೆಗೆ ಸಂಕೇತ ಅಲ್ಲ. ಆದ್ದರಿಂದ ನಮ್ಮಿಂದ ಏನಾದರೂ ಆಗುತ್ತಿಲ್ಲ, ಮಾನಸಿಕವಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಾದರೆ ಇನ್ನೊಬ್ಬರ ಸಹಾಯ ಪಡೆಯುವುದು ಅಗತ್ಯವಾಗಿದೆ. ಯಾರೂ ಮಾನಸಿಕ ಆರೋಗ್ಯಕ್ಕೆ ಸಂಬಂದಿಸಿ ಸೂಕ್ತ ಸಹಕಾರ ಪಡೆಯುತ್ತಾರೆ ಅಂತವರು ಆತ್ಮಹತ್ಯೆ ಕಡಿಮೆ ಮಾಡಿಕೊಳ್ಳುತ್ತಾರೆ.

ಆತ್ಮಹತ್ಯೆ ಮಾಡುತ್ತೇನೆ ಎಂದು ಹೇಳುವವರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂಬ ಯೋಚನೆ ತಪ್ಪು, ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದವರು ಮತ್ತೊಮ್ಮೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಂಶೋಧನೆಗಳು ಹೇಳುತ್ತದೆ. ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದವರಲ್ಲಿ 20 ರಿಂದ 50 ಶೇ ದಷ್ಟು ಜನರು ಮತ್ತೆ ಪ್ರಯತ್ನಿಸುತ್ತಾರೆ ಎಂಬುದು ತಿಳಿದು ಬಂದಿದೆ. ಹಾಗಾಗಿ ಇಂತಹವರ ಬಗ್ಗೆ ಹೆಚ್ಚು ಜಾಗೃತರಾಗಿರ ಬೇಕು. ದುರ್ಬಲ ಮನಸ್ಥಿತಿ ಇರುವವರೇ ಆತ್ಮಹತ್ಯೆ ಮಾಡುಕೊಳ್ಳುತ್ತಾರೆ ಎಂಬುದೂ ಸುಳ್ಳು. ಹೆಚ್ಚಿನ ಸಮಯದಲ್ಲಿ, ಸಮಸ್ಯೆ ನಿವಾರಿಸುವ ಬಗ್ಗೆ ಧೈರ್ಯ ಇಲ್ಲದಿರುವವರು, ಕೀಳರಿಮೆ ಇರುವವರು, ಸಣ್ಣ ಸಣ್ಣ ವಿಚಾರಗಳನ್ನು ಅತಿಯಾಗಿ ಯೋಚಿಸುವವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. 30 ಶೇ. ದಷ್ಟು ಆತ್ಮಹತ್ಯೆಗಳು ಮದ್ಯವ್ಯಸನದಿಂದ ಆಗುತ್ತದೆ. ಮದ್ಯ ವ್ಯಸನ ಆರಂಭದಲ್ಲಿ ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಆದರೆ ಅದು ಬರಬರುತ್ತ ಚಟವಾಗಿ ಬೆಳೆಯುತ್ತದೆ. ಇದರಿಂದ ಬಹಳಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಮದ್ಯಸೇವೆನೆ ಸಾರ್ವಜನಿಕ ಆರೋಗ್ಯ ಸಮಸ್ಯೆ. ಇದನ್ನು ನಿಯಂತ್ರಿಸಲು ಡಿಅಡಿಕ್ಷನ್ ಸೆಂಟರ್ ಗಳು ವ್ಯವಸ್ಥಿತವಾಗಿ ಆಗಬೇಕಿದೆ. ಸರಿಯಾದ ಮಾನಸಿಕ ಕಾಯಿಲೆಗಳಿಗೆ ಸರಿಯಾದ ಚಿಕಿತ್ಸೆ ಆಗಬೇಕು. ಮದ್ಯ ವ್ಯಸನ ವಿಮುಕ್ತಿಯ ಚಿಕಿತ್ಸೆ ಸೂಕ್ತವಾಗಿ ನಡಯಬೇಕಿದೆ ಎಂದು ಸೂಚಿಸಿದರು.  

ಇಂದು ಆತ್ಮಹತ್ಯೆಯನ್ನು ನಿಯಂತ್ರಿಸಬೇಕಾದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಾಗಬೇಕು. ಜೀವನದಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಆತ್ಮಾವಲೋಖನ ಮಾಡಿಕೊಳ್ಳುವುದು ಆಗಬೇಕಿದೆ.
ಮನೋ ಚಿಕಿತ್ಸೆ ಸರಿಯಾದ ಚಿಕಿತ್ಸೆ ಆಗಬೇಕಿದೆ ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಬ್ರಹ್ಮಾವರ, ಕಾರ್ಕಳ, ಕುಂದಾಪುರ, ನಿಟ್ಟೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹತ್ತಿರದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳಿವೆ. ಹಾಗಿದ್ದರೂ ಜಿಲ್ಲೆಯಲ್ಲಿ ಆತ್ಮಹತ್ಯೆ ಪ್ರಕರಣ ಗಳು ಹೆಚ್ಚಾಗಿದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಅರಿವು ಜಾಗೃತಿ ಅಗತ್ಯವಾಗಿದೆ ಎಂದು ತಿಳಿಸಿದರು.

ಮೆಂಟಲ್ ಹೆಲ್ತ್ ಕೇರ್ ಆಕ್ಟ್ ಸೆಕ್ಷನ್ 115 ನಲ್ಲಿ ಯಾರಾದರೂ ಆತ್ಮಹತ್ಯೆ ಮಾಡಿದರೆ ಸರಕಾರ ಅಂತವರಿಗೆ ಉಚಿತ ಚಿಕಿತ್ಸೆ ಕೊಡಿಸಬೇಕು ಎಂದು ಹೇಳುತ್ತದೆ. ಹಾಗೂ ಆತ್ಮಹತ್ಯೆ ಮಾಡಿಕೊಂಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಆಸ್ಪತ್ರೆಯ ವೆಚ್ಚವನ್ನು ಸರಕಾರ ಭರಿಸಬೇಕು ಎಂಬ ನಿಯಮವಿದೆ ಆದರೆ ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆತ್ಮಹತ್ಯೆ ನಿಯಂತ್ರಣದ ಬಗ್ಗೆ ಸಮುದಾಯದಲ್ಲಿ ಸರಿಯಾದ ಅರಿವು ಜಾಗೃತಿ ಮೂಡಿಸಬೇಕು. ಈ ಬಗ್ಗೆ ಧಾರ್ಮಿಕ ಮುಖಂಡರಿಗೆ, ಶಾಲಾ ಕಾಳೆಜುಗಳ ಶಿಕ್ಷಕರಿಗೆ ವೈದ್ಯರಿಗೆ ಈ ಬಗ್ಗೆ ಸಾಕಷ್ಟು ಮಾಹಿತಿ ನೀಡಬೇಕು. ಈ ಮೂಲಕ ಆತ್ಮಹತ್ಯೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ‘ಆತ್ಮಹತ್ಯೆ: ಆರ್ಥಿಕ -ಸಾಮಾಜಿಕ ಅಂಶ ಗಳು’ ಕುರಿತು ಹಿರಿಯ ಪತ್ರಕರ್ತ ರಾಜರಾಮ್ ತಲ್ಲೂರು ಮತ್ತು ‘ಆತ್ಮಹತ್ಯೆ ಮತ್ತು ಮಾಧ್ಯಮ ವರದಿ’ ಕುರಿತು ಮನೋವೈದ್ಯ ಡಾ.ದೀಪಕ್ ಮಲ್ಯ ಮಾತನಾಡಿದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಭಾರತೀಯ ಮನೋವೈದ್ಯರ ಸೊಸೈಟಿ ಕರ್ನಾಟಕ ಶಾಖೆ ಅಧ್ಯಕ್ಷ ಡಾ.ಪಿ.ಕೆ.ಕಿರಣ್ ಕುಮಾರ್ ಮಾತನಾಡಿ, ಇಂದು ಬಹುತೇಕ ಆತ್ಮಹತ್ಯೆಗಳಿಗೆ ಕಾರಣ ಖಿನ್ನತೆ. ಈ ಬಗ್ಗೆ ನಾವೆಲ್ಲ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ವರ್ತನೆ, ಮಾತುಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ವರನ್ನು ಗುರುತಿಸಬಹುದಾಗಿದೆ. ಅದನ್ನು ಅರ್ಥ ಮಾಡಿಕೊಂಡರೆ ಆತ್ಮಹತ್ಯೆಯನ್ನು ತಡೆಯಬಹುದು ಎಂದು ಅವರು ತಿಳಿಸಿದರು.

ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಜಿಲ್ಲಾ ಮನೋರೋಗ ತಜ್ಞ ಡಾ.ವಾಸುದೇವ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ಡಾ.ರವೀಂದ್ರ ಮುನೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಡಾ.ಎ.ವಿ.ಬಾಳಿಗ ಆಸ್ಪತ್ರೆಯ ಮನಶಾಸ್ತ್ರಜ್ಞ ನಾಗರಾಜ ಮೂರ್ತಿ ವಂದಿಸಿದರು. ಆಪ್ತ ಸಮಾಲೋಚಕಿ ಪದ್ಮ ರಾಘವೇಂದ್ರ, ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ನಿರೂಪಿಸಿ, ಪತ್ರಕರ್ತ ಚೇತನ್ ಮಟಪಾಡಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!