ಭಾರತದಲ್ಲಿ ಶೇ 63ರಷ್ಟು ಆತ್ಮಹತ್ಯೆಗಳಷ್ಟೇ ದಾಖಲು- ವಿಶ್ವ ಆರೋಗ್ಯ ಸಂಸ್ಥೆ
ನವದೆಹಲಿ ಸೆ.9: ಪ್ರತಿ ವರ್ಷ ಜಗತ್ತಿನಲ್ಲಿ 7 ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವನ ಕೊನೆಗೊಳಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿ ವಿಶ್ವ ಸಂಸ್ಥೆ ನೀಡಿರುವ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಿಗಿಂತ 20 ಪಟ್ಟಿಗೂ ಹೆಚ್ಚು ಮಂದಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ ಹಾಗೂ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಜನರು ಆತ್ಮಹತ್ಯೆ ಕುರಿತು ಯೋಚಿಸುತ್ತಿರುತ್ತಾರೆ ಎಂದು ತಿಳಿಸಿದೆ.
ಪ್ರತಿಯೊಂದು ಆತ್ಮಹತ್ಯೆಯನ್ನು ಕೂಡ ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ತೀವ್ರ ವೇದನೆ ಅಥವಾ ಸಮಸ್ಯೆಗಳಿಂದ ಬಳಲುತ್ತಿರುವ ಲಕ್ಷಾಂತರ ಮಂದಿಯಲ್ಲಿ ಆತ್ಮಹತ್ಯಾ ಮನೋಭಾವ ಇರುತ್ತದೆ. ಇದು ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆ. ಹಾಗಾಗಿ ಪ್ರತಿಯೊಂದು ಆತ್ಮಹತ್ಯೆಯೂ ಆ ವ್ಯಕ್ತಿಯ ಸುತ್ತಲೂ ಇರುವವರಲ್ಲಿ ಗಾಢ ಪರಿಣಾಮವನ್ನು ಉಂಟು ಮಾಡುತ್ತದೆ. ಜನರಲ್ಲಿ ಜಾಗೃತಿ ಮೂಡಿಸಿ, ಅವರು ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾದರೆ ಆತ್ಮಹತ್ಯೆ ಪ್ರಮಾಣವನ್ನು ಗಣನೀಯವಾಗಿ ಕಡಿತ ಮಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.
ಜಗತ್ತಿನ ಒಟ್ಟು ಆತ್ಮಹತ್ಯೆಗಳ ಪೈಕಿ ಶೇ 77ರಷ್ಟು ಮಧ್ಯಮ ಮತ್ತು ಕೆಳ ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ (ಎನ್‍ಸಿಆರ್‍ಬಿ) ಅಪಘಾತ ಮತ್ತು ಆತ್ಮಹತ್ಯೆಯಿಂದ ಸಾವು ವರದಿಯ ಪ್ರಕಾರ 2021 ರಲ್ಲಿ ಭಾರತದಲ್ಲಿ 1.64 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಲಕ್ಷ ಜನರಲ್ಲಿ 12 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಲೆಕ್ಕಾಚಾರ ಹಾಕಲಾಗಿದೆ.
ಭಾರತದಲ್ಲಿ ವಾಸ್ತವದಲ್ಲಿ ಇನ್ನೂ ಹೆಚ್ಚು ಆತ್ಮಹತ್ಯೆಗಳು ನಡೆಯುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಎಫ್‍ಐಆರ್ ದಾಖಲಾದ ಆತ್ಮಹತ್ಯೆ ಪ್ರಕರಣಗಳು ಮಾತ್ರ ಎನ್‍ಸಿಆರ್‍ಬಿ ವರದಿಯಲ್ಲಿ ಉಲ್ಲೇಖವಾಗುತ್ತವೆ. ಕುಟುಂಬದ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಬಹಿರಂಗವಾದರೆ, ಆ ಕುಟುಂಬದ ಹೆಣ್ಣು ಮತ್ತು ಗಂಡು ಮಕ್ಕಳ ಮದುವೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಆತ್ಮಹತ್ಯೆಯನ್ನು ಬಹಿರಂಗಪಡಿಸದೇ ಇರಲು ಜನರು ಬಯಸುತ್ತಾರೆ. 2017ರವರೆಗೆ, ಆತ್ಮಹತ್ಯೆ ಪ್ರಯತ್ನವು ಶಿಕ್ಷಾರ್ಹ ಅಪರಾಧವಾಗಿತ್ತು. ಆತ್ಮಹತ್ಯೆಯು ಕಾನೂನು ಸಮಸ್ಯೆಗಳನ್ನು ಉಂಟು ಮಾಡಬಹುದು ಎಂಬ ಭಾವನೆಯೂ ಜನರಲ್ಲಿ ಇದೆ. ಈ ಎಲ್ಲ ಕಾರಣಗಳಿಂದ ಆತ್ಮಹತ್ಯೆ ಪ್ರಯತ್ನ ಮತ್ತು ಆತ್ಮಹತ್ಯೆಯನ್ನು ಮುಚ್ಚಿಡುವ ಸಾಧ್ಯತೆಗಳೇ ಹೆಚ್ಚು. ಜಾಗತಿಕ ಅನಾರೋಗ್ಯ ಹೊರೆ ವರದಿಯ ಪ್ರಕಾರ, ಭಾರತದಲ್ಲಿ ಶೇ 63ರಷ್ಟು ಆತ್ಮಹತ್ಯೆಗಳಷ್ಟೇ ದಾಖಲಾಗುತ್ತವೆ ಎಂದು ತಿಳಿದು ಬಂದಿದೆ.
ಇನ್ನು ಡಬ್ಲ್ಯುಎಚ್‍ಒ ಮತ್ತು ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆ ಸಂಸ್ಥೆಯ ಸಹಯೋಗದಲ್ಲಿ ಸೆ.10 ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತದೆ. ಈದಿನ ಆತ್ಮಹತ್ಯೆ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯುತ್ತದೆ. ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳೆಲ್ಲವೂ ಜತೆಯಾಗಿ ಆತ್ಮಹತ್ಯೆಯನ್ನು ತಡೆಯಲು ಸಾಧ್ಯ ಎಂಬ ಏಕೈಕ ಧೈಯದಿಂದ ಕೆಲಸ ಮಾಡುತ್ತವೆ. ‘ಕ್ರಿಯೆಯ ಮೂಲಕ ಭರವಸೆ ಮೂಡಿಸಿ’ ಎಂಬುದು 2021ರಿಂದ 2023ರವರೆಗಿನ ಧ್ಯೇಯವಾಕ್ಯವಾಗಿದೆ. ಆತ್ಮಹತ್ಯೆಗೆ ಪರ್ಯಾಯವಿದೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವುದು, ಅವರಲ್ಲಿ ಆತ್ಮವಿಶ್ವಾಸ ಹಾಗೂ ಅರಿವಿನ ಬೆಳಕು ಮೂಡುವಂತೆ ಮಾಡುವುದು ಈ ಧ್ಯೇಯವಾಕ್ಯದ ಅರ್ಥವಾಗಿದೆ.
ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆ ಸಂಸ್ಥೆಯು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ‘ಭೂಗೋಳಕ್ಕೆ ಸೈಕಲ್ ಸುತ್ತು’ ಎಂಬ ಅಭಿಯಾನವನ್ನೂ ನಡೆಸುತ್ತಿದೆ. ಇದು ಸತತ ಒಂಬತ್ತನೇ ವರ್ಷಕ್ಕೆ ಕಾಲಿಟ್ಟಿದ್ದು, ಇದು ವಿಶ್ವ ಆತ್ಮಹತ್ಯೆ ತಡೆ ದಿನಂದು ಆರಂಭವಾಗಿ ವಿಶ್ವ ಮಾನಸಿಕ ಆರೋಗ್ಯ ದಿನದಂದು (ಅ.10) ಸಮಾರೋಪಗೊಳ್ಳುತ್ತದೆ. ಜಗತ್ತಿನ ವಿವಿಧ ಭಾಗಗಳ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇದರಲ್ಲಿ ಭಾಗಿಯಾಗಿದ್ದಾರೆ, ಜಾಗೃತಿ ಮೂಡಿಸಿದ್ದಾರೆ.