ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಸಿಧು ಮೂಸೆವಾಲಾ ಹಂತಕರು

ಚಂಡಿಗಡ,ಸೆ.12: ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶೂಟರ್ ದೀಪಕ್ ಮುಂಡಿ ಹಾಗೂ ಆತನ ಸಹಚರರಾದ ಕಪಿಲ ಪಂಡಿತ್ ಮತ್ತು ರಾಜಿಂದರ್ ಅಲಿಯಾಸ್ ಜೋಕರ್ ಅವರನ್ನು ಪಂಜಾಬ್ ಪೊಲೀಸ್ ನ ಗ್ಯಾಂಗಸ್ಟರ್ ನಿಗ್ರಹ ಕಾರ್ಯಪಡೆ ಬಂಧಿಸಿದೆ. 

ಸೆ.10 ರಂದು ಈ ಮೂವರು ಆರೋಪಿಗಳು ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪ.ಬಂಗಾಳದ ದಾರ್ಜಿಲಿಂಗ್ ಜಿಲ್ಲೆಯ ಖೈರಿಬಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ-ನೇಪಾಳ ಗಡಿಯ ತನಿಖಾ ಚೌಕಿಯ ಬಳಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಈಗ 23ಕ್ಕೆ ಏರಿದೆ.

ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಶಾರ್ಪ್ ಶೂಟರ್ ಗಳನ್ನು ಬಂಧಿಸುವುದರೊಂದಿಗೆ ಅಪರಾಧದ ಹಿಂದಿನ ಕಾರ್ಯತಂತ್ರ ಮತ್ತು ಒಳಸಂಚನ್ನು ಬಯಲಿಗೆಳೆದಿರುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ. 

ಶೂಟರ್ ಗಳಾದ ಮನಪ್ರೀತ್ ಸಿಂಗ್ ಅಲಿಯಾಸ್ ಮನು ಕುಸ್ಸಾ, ಜಗರೂಪ್ ಸಿಂಗ್ ಅಲಿಯಾಸ್ ರೂಪಾ ಅಮೃತಸರದ ಭಕ್ನಾ ಗ್ರಾಮದಲ್ಲಿ ಪೊಲೀಸ್ ಎನ್ಕೌಂಟರ್ ಗೆ ಬಲಿಯಾಗಿದ್ದರು. ಇತರ ವೂವರು ಶೂಟರ್ ಗಳಾದ ಪ್ರಿಯವ್ರತ ಫೌಝಿ, ಕಶಿಷ್ ಮತ್ತು ಅಂಕಿತ್ ಸೆರ್ಸಾರನ್ನು ಈ ಹಿಂದೆಯೇ ಬಂಧಿಸಲಾಗಿದೆ.

ಮೂಸೆವಾಲಾರ ಹತ್ಯೆಯ ಬಳಿಕ ಮುಂಡಿ ಮತ್ತು ಕಪಿಲ್ ಜೊತೆಯಾಗಿ ವಾಸವಿದ್ದು, ಮುಖ್ಯ ಸಂಚುಕೋರನಾಗಿರುವ ಕೆನಡಾದಲ್ಲಿರುವ ಗ್ಯಾಂಗ್ ಸ್ಟರ್ ಗೋಲ್ಡಿ ಬಾರ್ ನಿರ್ದೇಶನದ ಮೇರೆಗೆ ನಿರಂತರವಾಗಿ ನೆಲೆಗಳನ್ನು ಬದಲಿಸುತ್ತಿದ್ದರು. ನಕಲಿ ಪಾಸ್‌ಪೋರ್ಟ್‌ಗಳ ಮೂಲಕ ಅವರಿಬ್ಬರಿಗೂ ದುಬೈನಲ್ಲಿ ನೆಲೆ ಕಲ್ಪಿಸುವದಾಗಿ ಬ್ರಾರ್ ಭರವಸೆ ನೀಡಿದ್ದ. ನೇಪಾಳ ಅಥವಾ ಥೈಲಂಡ್ನಲ್ಲಿ ನಕಲಿ ಪಾಸ್ ಪೋರ್ಟ್ ಗಳನ್ನು ಪಡೆದುಕೊಂಡ ಬಳಿಕ ಅವರು ದುಬೈಗೆ ಹಾರಲಿದ್ದರು. ಮೊದಲೇ ನೇಪಾಳವನ್ನು ಸೇರಿಕೊಂಡಿದ್ದ ರಾಜಿಂದರ್ ಅವರ ನೇಪಾಳ ಪ್ರವೇಶವನ್ನು ಸುಗಮಗೊಳಿಸಲು ಮತ್ತು ಅಲ್ಲಿ ಸುರಕ್ಷಿತ ಮನೆಗೆ ಕರೆದೊಯ್ಯಲು ಪ.ಬಂಗಾಳಕ್ಕೆ ಆಗಮಿಸಿದ್ದ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ತಿಳಿಸಿದರು.

ಪಂಜಾಬ್ ಸರಕಾರವು ಮೂಸೆವಾಲಾಗೆ ನೀಡಿದ್ದ ರಕ್ಷಣೆಯನ್ನು ಹಿಂದೆಗೆದುಕೊಂಡ ಒಂದು ದಿನದ ಬಳಿಕ, ಮೇ 29ರಂದು ಅವರ ಹತ್ಯೆ ನಡೆದಿತ್ತು. ಇನ್ನು ಬಂಧಿತರ ಪೈಕಿ ಓರ್ವ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವ ಸಂಚಿನೊಂದಿಗೆ ಗುರುತಿಸಿಕೊಂಡಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!