ರಾಜ್ಯದ ನಿರುಪಯೋಗಿ ಸಂಸದರಿಗೆ ಒಂದಿಷ್ಟು ಮಾತನಾಡಲಾದರೂ ಧೈರ್ಯ ನೀಡಿ-ಪ್ರಧಾನಿಗೆ ಸಿದ್ದರಾಮಯ್ಯ ಸಲಹೆ
ಬೆಂಗಳೂರು: ಯಾರದೋ ಶ್ರಮವನ್ನು ತಮ್ಮ ಶ್ರಮ ಎಂದು ಹೇಳಿಕೊಳ್ಳುವ ಕೆಟ್ಟ ಚಾಳಿಯನ್ನು ಬಿಟ್ಟು, ಸ್ವಂತ ಶ್ರಮ ಎಷ್ಟು ಎಂದು ಜನರಿಗೆ ತಿಳಿಸಬೇಕು ಎಂದು ಪ್ರಧಾನಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೆ. 2ರಂದು ಮಂಗಳೂರಿಗೆ ಬರುವುದು ಖಚಿತವಾಗುತ್ತಿದ್ದಂತೆ ಈ ಹೇಳಿಕೆ ನೀಡಿರುವ ಅವರು, ‘ಮಂಗಳೂರಿಗೆ ಬಂದು ದಯಮಾಡಿ ಸುಳ್ಳು ಹೇಳಬೇಡಿ. ನಿಜ ಏನೆಂದು ಹೇಳಿ ಹೋಗಿ. ನಿಮಗೆ ಹಲವು ಮನವಿ, ಒತ್ತಾಯಗಳನ್ನು ಮಾಡುವುದಿದೆ ಎಂದಿದ್ದಾರೆ.
‘ರಾಜ್ಯದ ನಿರುಪಯೋಗಿ ಸಂಸದರಿಗೆ ಒಂದಿಷ್ಟು ಮಾತನಾಡಲಾದರೂ ಧೈರ್ಯ ನೀಡಿ, ಸಮಸ್ಯೆ ಕೇಳಿ ರಾಜ್ಯದ ಕಷ್ಟ ಏನೆಂದು ತಿಳಿಯುತ್ತದೆ. ಇಲ್ಲದಿದ್ದರೆ ನಗೆಪಾಟಲಿಗೆ ಈಡಾಗುತ್ತೀರಿ. ಸುಳ್ಳುಗಳನ್ನು ಕೇಳಿ ಕೇಳಿ ನಿಮ್ಮ ಜೊತೆಗಿದ್ದ ಶೀಲ ಲಕ್ಷ್ಮಿ ನಿಮ್ಮಿಂದ ದೂರವಾಗಿದ್ದಾಳೆ. ಶೀಲ ಲಕ್ಷ್ಮಿಯನ್ನು ಕಳೆದುಕೊಂಡ ಮನುಷ್ಯರು ಚರಿತ್ರೆಯಲ್ಲಿ ಬುರ್ನಾಸುಗಳಾಗುತ್ತಾರೆ’ ಎಂದಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಜಾರಿಗೆ ತಂದ ನೀರು ಸರಬರಾಜು ಯೋಜನೆಗಳ ಹೆಸರುಗಳನ್ನು ಬದಲಾಯಿಸಿ ‘ಜಲಜೀವನ್ ಮಿಷನ್ ಯೋಜನೆ’ ಎಂದು ಹೆಸರು ಬದಲಾಯಿಸಿದ್ದೀರಿ. ಆದರೆ, ಕೆಲವು ಗ್ರಾಮಗಳಿಗೆ ತೆರಳಿ ನೋಡಿದರೆ, ರಾಜ್ಯ ಸರ್ಕಾರ ಜನರಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಿದ್ದಲ್ಲದೆ ಹೊಸದಾಗಿ ಸಂಪರ್ಕ ಕಲ್ಪಿಸಿದ್ದೇವೆಂದು ಹೇಳಿ ಕೇಂದ್ರ ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಟ್ಟಿರುವುದನ್ನು ನೋಡಬಹುದು’ ಎಂದಿದ್ದಾರೆ.