ಎನ್ ಡಿಟಿವಿಯ ಶೇ. 26 ರಷ್ಟು ಷೇರು ಖರೀದಿಗೆ ಮುಂದಾದ ಅದಾನಿ ಗ್ರೂಪ್
ನವದೆಹಲಿ: ಅದಾನಿ ಸಮೂಹದ ಎಎಮ್ಜಿ ಮೀಡಿಯಾ, ಪರೋಕ್ಷವಾಗಿ ಎನ್ಡಿಟಿವಿಯ ಶೇ. 26 ರಷ್ಟು ಷೇರುಗಳ ಖರೀದಿ ಮಾಡಲು ನಿರ್ಧರಿಸಿದೆ.
ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (VCPL) ಸಂಸ್ಥೆಯ ಹೆಸರಿನಲ್ಲಿ ಈ ಖರೀದಿ ಪ್ರಕ್ರಿಯೆ ನಡೆಸಲು ಅದಾನಿ ಗ್ರೂಪ್ ಮುಂದಾಗಿದೆ. ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಎಎಂಜಿ ಮೀಡಿಯಾ ನೆಟ್ವರ್ಕ್ಸ್ ಲಿಮಿಟೆಡ್ (AMNL) ಸಂಸ್ಥೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಖರೀದಿ ಪ್ರಕ್ರಿಯೆಯು ಸಂಸ್ಥೆಯ ಅತಿದೊಡ್ಡ ಮೈಲಿಗಲ್ಲು ಆಗಲಿದೆ. ಎಎಂಎನ್ ಭಾರತೀಯ ನಾಗರಿಕರು, ಗ್ರಾಹಕರು ಮತ್ತು ಭಾರತದಲ್ಲಿ ಆಸಕ್ತಿ ಹೊಂದಿರುವವರಿಗೆ ಮಾಹಿತಿ ಮತ್ತು ಜ್ಞಾನವನ್ನು ನೀಡಲು ಪ್ರಯತ್ನಿಸುತ್ತದೆ. ಸುದ್ದಿ ವಿತರಣೆಯಲ್ಲಿ ಎನ್ಡಿಟಿವಿ ನಾಯಕತ್ವವನ್ನು ಬಲಪಡಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಎಎಂಜಿ ಮೀಡಿಯಾ ನೆಟ್ವರ್ಕ್ಸ್ ಲಿಮಿಟೆಡ್ನ ಸಿಇಒ ಸಂಜಯ್ ಪುಗಾಲಿಯಾ ಅವರು ಹೇಳಿದ್ದಾರೆ.
ಎನ್ ಡಿಟಿವಿ ಮೂರು ದಶಕಗಳಿಂದ ಪ್ರಮುಖ ಮಾಧ್ಯಮ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಂಪನಿಯು ಮೂರು ರಾಷ್ಟ್ರೀಯ ಸುದ್ದಿ ವಾಹಿನಿಗಳನ್ನು ಹೊಂದಿದೆ. 2022ರ ಆರ್ಥಿಕ ವರ್ಷದಲ್ಲಿ ಎನ್ಡಿಟಿವಿ ಒಟ್ಟು 421 ಕೋಟಿ ಆದಾಯ ಸಂಗ್ರಹಿಸಿತ್ತು. ಈ ಪೈಕಿ 85 ಕೋಟಿ ಲಾಭ ದಾಖಲಿಸಿತ್ತು.