ಸಂಪುಟ ಸಭೆ ಇಂದು: ಪಿಎಫ್ಐ ನಿಷೇಧ ಕುರಿತು ಮಹತ್ವದ ನಿರ್ಣಯ?
ಬೆಂಗಳೂರು: ನಗರದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಪಿಎಫ್ಐ ನಿಷೇಧ ಕುರಿತು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ತನಿಖೆ ಸೇರಿದಂತೆ ವಿವಿಧ ವಿಚಾರಗಳು ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಲಿದ್ದು, ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಗಲಭೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಚರ್ಚೆ ನಡೆಯಲಿದೆ. ಅಲ್ಲದೇ, ಗಲಭೆಯಲ್ಲಿ ಎಸ್’ಡಿಪಿಐ ಸಂಘಟನೆ ನಿಷೇಧಿಸುವ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಇನ್ನು ಕೊರೋನಾ ಆತಂಕದ ನಡುವೆಯೇ ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಗಾರು ಅಧಿವೇಶನ ನಡೆಸಲು ಸಜ್ಜಾಗಿರುವ ರಾಜ್ಯ ಸರ್ಕಾರ ಇಂದು ನಡೆಯುೋವ ಸಭೆಯಲ್ಲಿ ಅಧಿವೇಶನ ನಡೆಸುವ ದಿನಾಂಕ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಅಧಿವೇಶನಗಳ ನಡುವೆ 6 ತಿಂಗಳುಗಳಿಗಿಂತ ಹೆಚ್ಚು ಅಂತರವಿರಬಾರದು ಎಂದು ಸಂವಿಧಾನ ತಿಳಿಸಿದೆ. ಹೀಗಾಗಿ ಸೆಪ್ಟೆಂಬರ್ ಮೂರನೇ ನಾಲ್ಕನೇ ವಾರದೊಳಗಾಗಿ ಅಧಿವೇಶನ ನಡೆಸಬೇಕಾಗಿದೆ. ಜೊತೆಗೆ ಬಜೆಟ್’ಗೆ ಪೂರ್ಣ ಪ್ರಮಾಣದ ಅನುಮೋದನೆ ಪಡೆಯಬೇಕಾಗಿದೆ. ಹೀಗಾಗಿ ಕೊರೋನಾ ಸೋಂಕಿನ ಆತಂಕದ ನಡುವೆಯೂ ಅಧಿವೇಶನ ನಡೆಸುವ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ.
ಒಟ್ಟು 5 ದಿನಗಳ ಕಾಲ ಅಥವಾ 10 ದಿನಗಳ ಕಾಲ ಅಧಿವೇಶನ ಕಲಾವ ನಡೆಸುವ ಪ್ರಸ್ತಾಪವಿದೆ. ಕೊರೋನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಿಧಾನಮಂಡಲ ಅಧಿವೇಶನ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈಗಾಗಲೇ ಸಿದ್ದತೆ ಕೈಗೊಳ್ಳುತ್ತಿದ್ದಾರೆ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸ್ಥಳ ಮತ್ತು ದಿನಾಂತ ಕುರಿತು ವಿಸ್ತೃತವಾಗಿ ಚರ್ಚೆ ನಡೆಯಲಿದ್ದು, ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ,