ಸೆರೆ ಸಿಕ್ಕ ಲಷ್ಕರ್-ಎ-ತೊಯ್ಬಾ ಉಗ್ರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಐಟಿ ಸೆಲ್’ನ ಮಾಜಿ ಉಸ್ತುವಾರಿ

ಶ್ರೀನಗರ ಜು.3: ಜಮ್ಮುಕಾಶ್ಮೀರದಲ್ಲಿ ಸೆರೆ ಸಿಕ್ಕಿರುವ ಲಷ್ಕರ್-ಎ-ತೊಯ್ಬಾ ಉಗ್ರ ಬಿಜೆಪಿಯ ಸಕ್ರಿಯ ಸದಸ್ಯನಾಗಿದ್ದ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ರವಿವಾರ ಬೆಳಗ್ಗೆ ಜಮ್ಮುವಿನ ರಿಯಾಸಿ ಪ್ರದೇಶದಲ್ಲಿ ತಾಲಿಬ್ ಹುಸೇನ್ ಶಾ ಮತ್ತು ಆತನ ಸಹಚರರನ್ನು ಗ್ರಾಮಸ್ಥರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಅವರಿಂದ ಎರಡು ಎಕೆ ರೈಫಲ್‌ಗಳು, ಹಲವಾರು ಗ್ರೆನೇಡ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಾಧ್ಯಮವೊಂದರ ವರದಿ ಪ್ರಕಾರ, ಆರೋಪಿಯು ಜಮ್ಮುವಿನಲ್ಲಿ ಅಲ್ಪಸಂಖ್ಯಾತ ಮೋರ್ಚಾ ಸಾಮಾಜಿಕ ಮಾಧ್ಯಮ ಉಸ್ತುವಾರಿ ಕೂಡ ಆಗಿದ್ದ ಎಂದು ತಿಳಿಸಲಾಗಿದೆ.

ಉಗ್ರನಿಗೆ ಪಕ್ಷದೊಂದಿಗೆ ಸಂಬಂಧ ಇರುವ ಮಾಹಿತಿ ಬೆಳಕಿಗೆ ಬರುತ್ತಿದ್ದಂತೆ,ಯಾವುದೇ ಹಿನ್ನೆಲೆ ಪರಿಶೀಲನೆಯಿಲ್ಲದೆ ಜನರನ್ನು ಪಕ್ಷಕ್ಕೆ ಸೇರಲು ಅನುವು ಮಾಡಿಕೊಡುವ ಆನ್‌ಲೈನ್ ಸದಸ್ಯತ್ವದ ವ್ಯವಸ್ಥೆಯನ್ನು ಬಿಜೆಪಿ ದೂಷಿಸಿದೆ. ಜಮ್ಮು ಪ್ರಾಂತ್ಯದ ಪಕ್ಷದ ಐಟಿ ಮತ್ತು ಸಾಮಾಜಿಕ ಮಾಧ್ಯಮದ ಉಸ್ತುವಾರಿಯಾಗಿ ಬಂಧಿತ ಶಾನನ್ನು ಬಿಜೆಪಿಯು ಮೇ 9ರಂದು ನೇಮಿಸಿತ್ತು.”ರಜೌರಿ ಜಿಲ್ಲೆಯ ಡ್ರಾಜ್‌ ಕೊಟ್ರಂಕದ ತಾಲಿಬ್ ಹುಸೇನ್ ಶಾರನ್ನು ಜಮ್ಮು ಪ್ರಾಂತ್ಯದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಐಟಿ ಮತ್ತು ಸಾಮಾಜಿಕ ಮಾಧ್ಯಮದ ನೂತನ ಉಸ್ತುವಾರಿಯಾಗಿ ತಕ್ಷಣವೇ ಜಾರಿಗೆ ಬರುವಂತೆ ನೇಮಿಸಲಾಗಿದೆ” ಎಂದು ಜಮ್ಮು ಮತ್ತು ಕಾಶ್ಮೀರದ ಅಲ್ಪಸಂಖ್ಯಾತ ಮೋರ್ಚಾ ಆದೇಶ ಹೊರಡಿಸಿತ್ತು. ಜಮ್ಮು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ಸೇರಿದಂತೆ ಹಲವು ಬಿಜೆಪಿಯ ಹಿರಿಯ ನಾಯಕರೊಂದಿಗೆ ಹುಸೇನ್‌ ಶಾ ನಿಂತಿರುವ  ಹಲವಾರು ಚಿತ್ರಗಳು ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Leave a Reply

Your email address will not be published. Required fields are marked *

error: Content is protected !!