‘ಕಾಂಗ್ರೆಸ್-ಮುಕ್ತ ಭಾರತ’ ಮಾತ್ರವಲ್ಲದೆ ಪ್ರತಿಪಕ್ಷಗಳೇ ಇಲ್ಲದ ಭಾರತವನ್ನು ಬಿಜೆಪಿ ಬಯಸುತ್ತಿದೆ- ಕಪಿಲ್ ಸಿಬಲ್ ಕಳವಳ
ನವದೆಹಲಿ: ಪ್ರಸ್ತುತ ನ್ಯಾಯಾಂಗದ ಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ನ್ಯಾಯಾಂಗದಲ್ಲಿರುವ ಕೆಲವು ಸದಸ್ಯರು “ನಾವು ತಲೆ ತಗ್ಗಿಸುವಂತೆ ಮಾಡಿದರು” ಮತ್ತು ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ “ನಾನು ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ” ಎಂದು ಭಾನುವಾರ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಕಪಿಲ್ ಸಿಬಲ್ ಅವರು ಇತ್ತೀಚಿನ ವರ್ಷಗಳಲ್ಲಿ, ವಾಕ್ ಸ್ವಾತಂತ್ರ್ಯ ಮತ್ತು ಅದನ್ನು ಸುಪ್ರೀಂ ಕೋರ್ಟ್ ಹೇಗೆ ವ್ಯಾಖ್ಯಾನಿಸುತ್ತಿರುವ ಬಗ್ಗೆ, ಸಂವಿಧಾನಾತ್ಮಕವಾಗಿ ಒಪ್ಪುವಂತಹ ಸಂಗತಿಗಳಿಗೆ ತಡೆಯೊಡ್ಡುತ್ತಿರುವ ಬಗ್ಗೆ ಮಾತನಾಡಿದ್ದಾರೆ.
ಇದೇ ವೇಳೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಪಿಲ್ ಸಿಬಲ್, ನ್ಯಾಯಾಂಗದ ಮೇಲೂ ಪ್ರಭಾವ ಬೀರುವ ಮೂಲಕ ದೇಶದಲ್ಲಿ ಅಘೋಷಿಸಿತ ತುರ್ತು ಪರಿಸ್ಥಿತಿ” ಇದೆ ಎಂದರು. ಪ್ರತಿನಿತ್ಯ ಕಾನೂನು ಸುವ್ಯವಸ್ಥೆ ಉಲ್ಲಂಘನೆಯಾಗುತ್ತಿದೆ. ಪ್ರಸ್ತುತ ಬಿಜೆಪಿ ಸರ್ಕಾರ ‘ಕಾಂಗ್ರೆಸ್-ಮುಕ್ತ ಭಾರತ’ ಮಾತ್ರವಲ್ಲದೆ ಪ್ರತಿಪಕ್ಷಗಳೇ ಇಲ್ಲದ ಭಾರತ’ವನ್ನು ಬಯಸುತ್ತಿದೆ ಎಂದು ಸಿಬಲ್ ಆರೋಪಿಸಿದರು. ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಬಂಧನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಬಲ್, ಇದು ಅತ್ಯಂತ ಆತಂಕಕಾರಿ. ನ್ಯಾಯಾಂಗದ ಕೆಲವು ಸದಸ್ಯರು “ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿದರು” ಎಂದು ಹೇಳಿದರು.