ಉಡುಪಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ಜಲ್ಲಿಮಿಶ್ರಣ ತೆರವುಗೊಳಿಸಿದ ಜನಪ್ರತಿನಿಧಿಗಳು
ಇತ್ತೀಚಿನ ದಿನಗಳಲ್ಲಿ ತಮ್ಮ ಕೆಲಸವನ್ನು ಮಾಡದ ಜನಪ್ರತಿನಿಧಿಗಳನ್ನು ದೂರುವವರೇ ಹೆಚ್ಚು. ಆದರೆ ಇಲ್ಲಿ ಒಂದು ವಿಶಿಷ್ಟ ಕೆಲಸವನ್ನು ಜನಪ್ರತಿನಿಧಿಗಳು ಮಾಡಿದ್ದಾರೆ. ಮಾತ್ರವಲ್ಲದೆ ಜನರ ಮೆಚ್ಚುಗೆಗೆ ಪಾತ್ರರಾಗಿ, ಸಂಭವಿಸಬಹುದಾದ ಅಪಘಾತಗಳನ್ನು ತಪ್ಪಿಸಿದ್ದಾರೆ .
ಮಾಜಿ ಶಾಸಕ ದಿವಂಗತ ಗೋಪಾಲ ಭಂಡಾರಿಯವರ ಅಂತಿಮ ದರ್ಶನ ಪಡೆದು ಉದ್ಯಾವರಕ್ಕೆ ಆಗಮಿಸುತ್ತಿದ್ದ ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಿಯಾಜ್ ಪಳ್ಳಿ ಮತ್ತು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೀನುಗಾರರ ಕಾರ್ಯದರ್ಶಿ ಕಿರಣ್ ಕುಮಾರ್ ಉದ್ಯಾವರ, ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಂತಹ ಜಲ್ಲಿ ಮಿಶ್ರಣವನ್ನು ತೆರವುಗೊಳಿಸುವ ಕೆಲಸವನ್ನು ಮಾಡಿದ್ದಾರೆ.
ಸದಾ ವಾಹನಗಳು ಮತ್ತು ಜನರಿಂದ ಬ್ಯುಸಿ ಆಗಿರುವ ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಬಲಾಯಿಪಾದೆ ಜಂಕ್ಷನ್ನಲ್ಲಿ ಇಂದು ಸಂಜೆಯ ಹೊತ್ತಿಗೆ ತೆರಳುತ್ತಿದ್ದ ಟೆಂಪೋ ದಿಂದ ರಸ್ತೆಯ ಮೇಲೆ ಜಲ್ಲಿ ಮಿಶ್ರಣ ಬಿದ್ದಿದ್ದವು. ಬಹಳಷ್ಟು ವಾಹನಗಳು ಈ ಭಾಗದಲ್ಲಿ ತೆರಳುತ್ತಿದ್ದು ಅದರಲ್ಲೂ ರಸ್ತೆ ದಾಟುವ ದ್ವಿಚಕ್ರ ವಾಹನಗಳಿಗೆ ಈ ಜಲ್ಲಿಕಲ್ಲುಗಳು ಬಹಳಷ್ಟು ಅಡೆತಡೆ ಉಂಟು ಮಾಡುತಿತ್ತು ಮತ್ತು ಸ್ಕಿಡ್ ಆಗಿ ಬೀಳಲು ಕಾರಣವಾಗುತಿತ್ತು. ಎರಡು ದಿನಗಳ ಹಿಂದೆಯಷ್ಟೇ ಇದೇ ಸ್ಥಳದಲ್ಲಿಅನಿಲ ತುಂಬಿದ ಬುಲೆಟ್ ಟ್ಯಾಂಕರ್ ಪಲ್ಟಿ ಬಿದ್ದು ಈ ಪರಿಸರದ ಸ್ಥಳದಲ್ಲಿ ಆತಂಕ ಸೃಷ್ಠಿಸಿತ್ತು. ಇದೀಗ ಈ ಜಲ್ಲಿ ಮಿಶ್ರಣ ಗಳಿಂದ ಬಹಳಷ್ಟು ಅಪಘಾತವಾಗುವ ಹಂತದಲ್ಲಿ ಜನಪ್ರತಿನಿಧಿಗಳು ಇದನ್ನು ತೆರವು ಗೊಳಿಸಿರುವುದು ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಉದ್ಯಾವರ ಗ್ರಾಮ ಪಂಚಾಯತ್ನ ಸ್ವಚ್ಛತಾ ಸಿಬ್ಬಂದಿಗಳ ಮುಖಾಂತರ ಉಪಾಧ್ಯಕ್ಷ ರಿಯಾಜ್ ಪಳ್ಳಿ ಮತ್ತು ಗ್ರಾಮ ಪಂಚಾಯತ್ ಸದಸ್ಯ ಕಿರಣ್ ಕುಮಾರ್ ಅವರು ಈ ಪರಿಸರದಲ್ಲಿ ಸಂಭಾವ್ಯ ಅಪಘಾತವಾಗುವುದನ್ನು ತಪ್ಪಿಸಿದ್ದಾರೆ. ತಮ್ಮ ವ್ಯಾಪ್ತಿಗೆ ಬರದೇ ಇದ್ದರೂ ಕೂಡ, ಈ ಇಬ್ಬರು ಜನಪ್ರತಿನಿಧಿಗಳು ಇತರರಿಗೆ ಆದರ್ಶರಾಗಿದ್ದಾರೆ.
ಉಡುಪಿ ಜಿಲ್ಲೆಯ ಆಸುಪಾಸಿನಲ್ಲಿ ಜಲ್ಲಿಕಲ್ಲು, ಕೆಂಪು ಕಲ್ಲು, ಮರಳುಗಳನ್ನು ಸಾಗಿಸುವಂತಹ ಟಿಪ್ಪರ್ ಮತ್ತು ಟೆಂಪೊಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡದೆ ನಿರ್ಲಕ್ಷ್ಯ ವಹಿಸುಸಿ ಸಾಗಾಟ ಮಾಡುವುದರಿಂದ ಬಹಳಷ್ಟು ಅಪಘಾತವಾಗುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ಕಂಡಿದ್ದೇವೆ. ಮುಂದಿನ ದಿನಗಳಲ್ಲಿ ಟಿಪ್ಪರ್, ಟೆಂಪೋ ಮತ್ತು ಲಾರಿ ಮಾಲಕರು ಇದರ ಬಗ್ಗೆ ನಿಗಾ ವಹಿಸದೇ ಇದ್ದರೆ, ಜನರೇ ಇವರಿಗೆ ಬುದ್ಧಿ ಕಲಿಸಲಿದ್ದಾರೆ.ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸದೆ ಇರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ