ಉಡುಪಿ : ಮಳೆಯ ನಡುವೆಯೇ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಡುಪಿ: ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗಮಂದಿರದಲ್ಲಿ ಉಡುಪಿ ಜಿಲ್ಲಾಡಳಿತ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು.ಇಂದು ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ವಿಪರೀತ ಮಳೆಯು ನಡುವೆಯೇ ಸ್ವಾತಂತ್ರ್ಯೋತ್ಸವನ್ನು ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಸಂಭ್ರಮದಲ್ಲಿ ಆಚರಿಸಲಾಯಿತು.
ಹೊಸ ಸರಕಾರ ಆಡಳಿತಕ್ಕೆ ಬಂದರೂ ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕವಾಗದ ಕಾರಣ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಹಾತ್ಮ ಗಾಂಧಿ ಬಯಲು ರಂಗಮಂದಿರದಲ್ಲಿ ಧ್ವಜಾರೋಹಣಗೈದು, ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಭಾರತ ಸರ್ಕಾರವು ಜಲಭದ್ರತೆಗಾಗಿ ಆಯೋಜಿಸಿದ “ಜಲಶಕ್ತಿ ಅಭಿಯಾನ”ವನ್ನು ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. 2019ನ್ನು ಜಲವರ್ಷವೆಂದು ಘೋಷಿಸಲಾಗಿದೆ. ಜಲಾವೃತ ಯೋಜನೆಯಡಿ ಜಲಸಂರಕ್ಷಣೆ ,ಜಲಸಾಕ್ಷಾರತೆ, ಜಲಮೂಲಗಳ ಪುನಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಜನರನ್ನು ಉದ್ಧೇಶಿಸಿ ಮಾತನಾಡಿದರು.
ಈ ಭಾರಿನ ಮುಂಗಾರು ಜಿಲ್ಲೆಯಲ್ಲಿ ಅತೀಯಾದ ಹಾನಿಯುಂಟುಮಾಡಿದ್ದು , ಮಳೆ, ಗಾಳಿ, ಸಿಡಿಲಿನ ಅಬ್ಬರಕ್ಕೆ ಮೃತ ಪಟ್ಟ ಕುಟುಂಬಕ್ಕೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ 4 ಲಕ್ಷ ರೂ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1ಲಕ್ಷ ಪಾವತಿಸಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿಧಿಗೆ ಸರಕಾರದಿಂದ 5 ಕೋಟಿ ಅನುದಾನ ಬಂದಿದ್ದು ಇವರೆಗೆ 57 ಲಕ್ಷ ರೂ ಪರಿಹಾರ ಧನ ವಿತರಿಸಲಾಗಿದೆ ಎಂದು ಹೇಳಿದರು. ಈ ವರ್ಷ ಬೆಸಿಗೆಯಲ್ಲೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು ,ವಿಪರೀತ ಮಳೆ ಬೀಳುವ ಉಡುಪಿ ಜಿಲ್ಲೆಯಲ್ಲಿ ಮಳೆ ನೀರು ಸಂಗ್ರಹಿಸುವ ಕರ್ತವ್ಯವನ್ನು ಪ್ರತಿಯೊಬ್ಬ ನಾಗರಿಕನು ಮಾಡಬೇಕು, ಜಿಲ್ಲಾಡಳಿತವು ಕೆರೆಕುಂಟೆಗಳ ಪುನಶ್ಚೇತನಗೊಳಿಸಲು ಮುಂದಾಗಿದೆಂದು ನುಡಿದರು.
ಜಿಲ್ಲೆಯಲ್ಲಿ ರಸ್ತೆ ಅವಘಡಗಳು ಹೆಚ್ಚುತ್ತಿದ್ದು ಸಾರ್ವಜನಿಕರು ರಸ್ತೆ ಸುರಕ್ಷತೆಗಳ ನಿಯಮವನ್ನು ಅರಿತು ವಾಹನ ಚಾಲನೆ ಮಾಡಬೇಕು, ಅದಕ್ಕಾಗಿ ಜಿಲ್ಲಾಡಳಿತವು ರಸ್ತೆ ಸುರಕ್ಷತಾ ಆಭಿಯಾನ ಶಾಲೆಗಳಲ್ಲಿ ಪ್ರಾರಂಭಿಸಲು ನಿರ್ಧರಿಸಿದೆ ಎಂದು ತಮ್ಮ ಸ್ವಾತಂತ್ರ್ಯೋತ್ಸವದ ಸಂದೇಶದಲ್ಲಿ ನುಡಿದರು.
ಮಳೆಯ ನಡುವೆಯೇ ಪಥಸಂಚಲನ ನಡೆದರೆ,ಜಿಲ್ಲಾಧಿಕಾರಿ ಕೂಡ ಮಳೆಯಲ್ಲೆ ನೆನೆದು ಗೌರವ ವಂದನೆ ಸ್ವೀಕರಿಸಿದರು.
ಕಳೆದ ಸಾಲಿನಲ್ಲಿ ಎಸ್. ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ರಸ್ತೆ ಸುರಕ್ಷತೆಗಳ ಬಗ್ಗೆ ಉತ್ತಮ ಕೆಲಸಮಾಡಿದ 3 ಶಾಲೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉತ್ತರ ಭಾರತದಲ್ಲಿ ನಡೆದ 62ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ವಿಧ್ವಂಸಕ ಕೃತ್ಯ ತಪಾಸಣಾ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ತೃತೀಯಾ ಸ್ಥಾನ ಪಡೆದ ಶಂಕರ್ ಕುಲಾಲ್ರನ್ನು ಸನ್ಮಾನಿಸಲಾಯಿತು.
ಆಗಸ್ಟ್ 12 ರಂದು ಕುಂದಾಪುರದ ದೇವಲ್ಕುಂದದಲ್ಲಿ ಅಮೋನಿಯಮ್ ಸೋರಿಕೆಯಾದಾಗ ತನ್ನ ಜೀವವನ್ನು ಲೆಕ್ಕಿಸದೆ ಕಾರ್ಮಿಕರ ಜೀವ ರಕ್ಷಿಸಿದ ಅಗ್ನಿಶಾಮಕ ಇಲಾಖೆಯ ವಸಂತ್ ಕುಮಾರ್ರನ್ನು ಈ ಸಂದರ್ಭ ಸನ್ಮಾನಿಸಲಾಯಿತು. 2019 ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ವಿತರಿಸಲಾಯಿತು.
2018-19 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಗಳನ್ನು ವಿತರಿಸಲಾಯಿತು.
ವಿಪರೀತ ಮಳೆಯಿಂದಾಗಿ 4 ಶಾಲೆಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವು ಜಿಲ್ಲಾಧಿಕಾರಿಗಳ ಆದೇಶದಂತೆ ರದ್ದಾಯಿತು.
ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್,ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಪೌರಾಯುಕ್ತ ಆನಂದ್ ಕಲ್ಲೋಳಿಕರ್ , ಎಎಸ್ಪಿ ಕುಮಾರ ಚಂದ್ರ ಉಪಸ್ಥಿತರಿದ್ದರು.