ಕಲ್ಮಾಡಿ- ವೆಲಂಕಣಿ ಮಾತೆಯ ತೇರಿನ ಮೆರವಣಿಗೆ

ಉಡುಪಿ-  ಕಲ್ಮಾಡಿ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ವೆಲಂಕಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವದ ನೊವೆನಾ ಪ್ರಾರ್ಥನಾ ಕೊನೆಯ ದಿನ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪರಮಪೂಜ್ಯ ಪೀಟರ್ ಪೌಲ್ ಸಲ್ದಾನ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆಯಿತು.
ಬಲಿ ಪೂಜೆಯ ಮೊದಲು ಆದಿ ಉಡುಪಿ ಜಂಕ್ಷನ್ ಬಳಿ ವೆಲಂಕಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವದ ಪ್ರಯುಕ್ತ ವೆಲಂಕಣಿ ಮಾತೆಯ ತೇರಿನ ಮೆರವಣಿಗೆಗೆ ವಿಧಾನಪರಿಷತ್ ಸದಸ್ಯರಾದ ಐವಾನ್ ಡಿಸೋಜಾ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆಯನ್ನು ನೀಡಿ, ವೆಲಂಕಣಿ ಮಾತೆ ಸರ್ವರಿಗೂ ಆಶೀರ್ವಾದ ಮಾಡಲಿ ಎಂದು ಹಾರೈಸಿದರು. ಕಲ್ಮಾಡಿ ದೇವಾಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿಸೋಜ ಸರ್ವರನ್ನು ಸ್ವಾಗತಿಸಿ ಸ್ವಾಗತಿಸಿದರು. ನೂರಾರು ಭಕ್ತರು ಶ್ರದ್ಧೆ ಮತ್ತು ಭಕ್ತಿಯಿಂದ ತೇರಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
 
ಹಲವಾರು ಧರ್ಮಗುರುಗಳು ಧರ್ಮಾಧ್ಯಕ್ಷರ ನೇತೃತ್ವದ ಬಲಿಪೂಜೆಯಲ್ಲಿ ಉಪಸ್ಥಿತರಿದ್ದು ಭಕ್ತರಿಗೆ ಆಶೀರ್ವಾದ ಮಾಡಿದರು.
ವೆಲಂಕಣಿ ಮಾತೆಯ ದೇವಾಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿಸೋಜ ರವರ ಮಾರ್ಗದರ್ಶನದಲ್ಲಿ ವಿವಿಧ ದೇವಾಲಯದ ಧರ್ಮಗುರುಗಳು   ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆ ವಿಧಿಗಳಲ್ಲಿ ಭಾಗವಹಿಸಿ ಭಕ್ತರಿಗೆ ಆಶೀರ್ವಾದ ಮಾಡಿದರು. ಪ್ರತಿಷ್ಠಾಪನಾ ಮಹೋತ್ಸವದ ಉಸ್ತುವಾರಿ ವಂದನೀಯ ಫಾ. ಪ್ರವೀಣ್ ಮೊಂತೆರೊ ವಿವಿಧ ಸಮಿತಿಗಳ ಸಹಕಾರದೊಂದಿಗೆ ನೊವೆನಾ ಪ್ರಾರ್ಥನೆಯ ಯಶಸ್ಸಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಗಸ್ಟ್ ರಂದು ಬೆಳಗ್ಗೆ 8 ಗಂಟೆಗೆ ಕೊಂಕಣಿzಯಲ್ಲಿ ದಿವ್ಯಬಲಿಪೂಜೆ ನಡೆಯಲಿದ್ದು ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಕೊಂಕಣಿಯಲ್ಲಿ, ಸಂಜೆ 6 ಗಂಟೆಗೆ ಕನ್ನಡದಲ್ಲಿ ಹಾಗೂ ರಾತ್ರಿ 8 ಗಂಟೆಗೆ ಇಂಗ್ಲಿಷಿನಲ್ಲಿ ಕೊನೆಯ ಬಲಿಪೂಜೆ ನೆರವೇರಲಿದೆ. ಸಂಜೆ 4 ಗಂಟೆಗೆ ಪ್ರತಿಷ್ಠಾಪನಾ ಮಹೋತ್ಸವದ ಸಂಭ್ರಮದ ದಿವ್ಯ ಬಲಿ ಪೂಜೆ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ನಡೆಯಲಿದೆ.
ಸಂಜೆ 4 ಗಂಟೆಯ ಸಂಭ್ರಮದ ದಿವ್ಯ ಬಲಿಪೂಜೆಯ ನೇರ ಪ್ರಸಾರ “ಉಡುಪಿ ಟೈಮ್ಸ್” (www.udupitimes.com) ಕನ್ನಡ ಅಂತರ್ಜಾಲ ಮಾಧ್ಯಮದಲ್ಲಿ ನೇರ ಪ್ರಸಾರವಾಗಲಿದೆ.
ಚಿತ್ರ ಕೃಪೆ : ಪ್ರವೀಣ್ ಕೋರೆಯ, ಸ್ಯಾನಿ ಡಿಜಿಟಲ್ ಸ್ಟುಡಿಯೋ ಕಲ್ಮಾಡಿ

Leave a Reply

Your email address will not be published. Required fields are marked *

error: Content is protected !!