“ಉಡುಪಿ ಹೆಲ್ಪ್” : ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
ಉಡುಪಿ : ಉಡುಪಿ ನಗರದಲ್ಲಿ ಮಳೆಗಾಲದಲ್ಲಿ ಎದುರಾಗುವ ವಿವಿಧ ಪ್ರಾಕೃತಿಕ ಸಮಸ್ಯೆಗಳ ಕ್ಷಿಪ್ರ ನಿರ್ವಹಣೆಗೆ ಜಾರಿಗೆ ತಂದಿರುವ ಹೊಸ ಆ್ಯಪ್ “ಉಡುಪಿ ಹೆಲ್ಪ್” (UಆUPI ಊಇಐP) ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ವಿಶೇಷ ಆಸಕ್ತಿಯಿಂದ ಜಾರಿಗೆ ಬಂದಿರುವ ಈ ಆ್ಯಪನ್ನು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಅವರು ಜೂನ್ 11ರಂದು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಿದ್ದರು. ಆ್ಯಪ್ ಬಿಡುಗಡೆಯಾದ ಒಂದೇ ವಾರದಲ್ಲಿ ಸುಮಾರು 73 ದೂರುಗಳು ಉಡುಪಿ ನಗರದ ಜನತೆಯಿಂದ ಫೋಟೋ / ವೀಡಿಯೋ ಸಮೇತ ಬಂದಿವೆ. ವಿಶೇಷವೇನೆಂದರೆ, ಈ ದೂರುಗಳಿಗೆ ಕ್ಷಿಪ್ರವಾಗಿ ಸ್ಪಂದಿಸಿರುವ ನಗರಾಡಳಿತವು, ದೂರಿನ ವಿಲೇವಾರಿಗೆ ನಿಗದಿಪಡಿಸಿರುವ ಗರಿಷ್ಠ 6 ಗಂಟೆಗಳ ಮಿತಿಗಿಂತ ಮುಂಚೆಯೇ ಸಮಸ್ಯೆಗಳಿಗೆ ಸ್ಪಂದಿಸಿ, ನಾಗರೀಕರಿಗೆ ನೆಮ್ಮದಿ ನೀಡಿದೆ.
ಕೆಲವು ದೂರುಗಳಿಗೆ ಒಂದು ಗಂಟೆಯೊಳಗೇ ಪರಿಹಾರ ಒದಗಿಸಿದೆ. ಬಂದಿರುವ ಎಲ್ಲಾ 73 ದೂರುಗಳನ್ನೂ ಪರಿಹರಿಸಿ ಶೇಕಡಾ 100 ರಷ್ಟು ಪ್ರಗತಿ ಸಾಧಿಸಿದೆ. ಸರಾಸರಿಯಾಗಿ 40 ನಿಮಿಷದಲ್ಲಿ ಪ್ರತೀ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಇದುವರೆಗೆ ಸುಮಾರು 469 ಮಂದಿ ಈ ಆ್ಯಪ್‍ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಧಾರಾಕಾರ ಮಳೆಯ ಸಮಸ್ಯೆ, ವಿದ್ಯುತ್ ಕಡಿತ, ಮರ ಬಿದ್ದ ಪ್ರಕರಣಗಳು, ವಿದ್ಯುತ್ ಕಂಬ ಬಿದ್ದಿರುವುದು, ಪ್ರವಾಹ, ಚರಂಡಿ, ಡ್ರೈನೇಜ್ ತುಂಬಿ ಅಡಚಣೆ, ಸಿಡಿಲಿನಿಂದ ಹಾನಿ, ಕಟ್ಟಡ ಕುಸಿತ, ಭೂಕುಸಿತ ಮತ್ತಿತರ ಪ್ರಾಕೃತಿಕ ಸಮಸ್ಯೆಗಳ ಬಗ್ಗೆ ಈ ಆ್ಯಪ್ ನಲ್ಲಿ ದೂರು ನೀಡಬಹುದು. ಈ ಆ್ಯಪ್ ನಲ್ಲಿ ಸಮಸ್ಯೆಗಳ ಫೋಟೋ ಕೂಡಾ ಬರುವುದರಿಂದ ನಗರಾಡಳಿತಕ್ಕೆ ಸಮಸ್ಯೆಯ ಸ್ವರೂಪ ತಕ್ಷಣವೇ ಗೊತ್ತಾಗುತ್ತಿದೆ. ಇದರಿಂದ ಅದರ ಅದರ ಪರಿಹಾರಕ್ಕೆ ಬೇಕಾದ ಸಿಬ್ಬಂದಿ, ಸಲಕರಣೆಗಳು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡೇ ಸ್ಥಳಕ್ಕೆ ಭೇಟಿ ನೀಡುವುದರಿಂದ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಅಲ್ಲದೇ, ಸಮಸ್ಯೆ ಪರಿಹಾರವಾದ ನಂತರ ಕೂಡಾ ಅದರ ಫೋಟೋ ತೆಗೆದು, ದೂರುದಾರನಿಗೆ ಕಳುಹಿಸಲಾಗುತ್ತಿದೆ. ಇದು ನಾಗರೀಕರ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ಅವರು ಇದರ ಮೇಲುಸ್ತುವಾರಿ ವಹಿಸಿದ್ದು, ನಗರಸಭೆ ಆಯುಕ್ತರು ಸಮಸ್ಯೆಗೆ ಸ್ಪಂದಿಸುವಲ್ಲಿ ಮುತುವರ್ಜಿ ವಹಿಸಿದ್ದಾರೆ.
ಉಡುಪಿ ನಗರಸಭೆಯಲ್ಲದೇ ಅರಣ್ಯ ಇಲಾಖೆ, ಮೆಸ್ಕಾಂ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಮತ್ತಿತರ ಇಲಾಖೆಗಳು ಆ ಆ್ಯಪ್ ನಲ್ಲಿನ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ.
ಸಾರ್ವಜನಿಕರು ಮೊಬೈಲ್‍ನಲ್ಲಿ ಗೂಗಲ್ ಪ್ಲೇಸ್ಟೋರ್‍ನಿಂದ (UಆUPI ಊಇಐP) ಆ್ಯಪ್‍ನ್ನು ಡೌನ್‍ಲೋಡ್ ಮಾಡಬಹುದು.