ಜಾಗತಿಕ ಪ್ರವಾಸಿ ತಾಣವಾಗುವ ಅರ್ಹತೆ ಇದೆ: ಬೊಮ್ಮಾಯಿ
ಉಡುಪಿ: ಉಡುಪಿ ಜಿಲ್ಲೆಗೆ ಜಾಗತಿಕ ಪ್ರವಾಸಿತಾಣವಾಗುವ ಎಲ್ಲ ಅರ್ಹತೆಗಳು ಇವೆ. ಅದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಕಾರ್ಯಪಡೆ ರಚಿಸಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲಾಗುವುದು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ಧಿ ಸಮಿತಿ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನ ಉದ್ಘಾಟಿಸಿ ಮಾತನಾಡಿದರು.
ಅಧಿಕಾರಿಗಳು, ಉದ್ಯಮಿಗಳು ಹಾಗೂ ಪ್ರವಾಸೋದ್ಯಮ ತಜ್ಞರು ಕಾರ್ಯಪಡೆಯಲ್ಲಿ ಇರಲಿದ್ದು, ಭವಿಷ್ಯದ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗುವುದು. ಉದ್ಯಮಿಗಳ ಹಾಗೂ ಪ್ರವಾಸಿಗರ ಅಗತ್ಯತೆಗಳಿಗೆ ಅನುಗುಣವಾಗಿ ಸುಸ್ಥಿರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಕರಾವಳಿಯಲ್ಲಿ ಅದ್ಭುತ ಪ್ರಾಕೃತಿಕ ಸೌಂದರ್ಯವಿದೆ. ಜಗತ್ತಿನ ಪ್ರವಾಸೋದ್ಯಮವನ್ನು ಸೆಳೆಯುವಂತಹ ಚಿನ್ನದ ಬಣ್ಣದ ಮರಳು, ನೀಲಿ ಬಣ್ಣದ ಸಮುದ್ರ ತೀರವಿದೆ. ಆದರೆ, ಇಲ್ಲಿನ ಪ್ರವಾಸೋದ್ಯಮಕ್ಕೆ ಒತ್ತು ಸಿಗದ ಪರಿಣಾಮ ಜಾಗತಿಕ ಮಟ್ಟಕ್ಕೆ ಬೆಳೆಯುವಲ್ಲಿ ವಿಫಲವಾಗಿದೆ. ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿಸಿ ‘ಇನ್‌ಕ್ರೆಡಿಬಲ್ ಇಂಡಿಯಾ ಮಾದರಿಯಲ್ಲಿ ಇನ್‌ಕ್ರೆಡಿಬಲ್ ಉಡುಪಿ’ ಘೋಷಣೆಯನ್ನು ಸಾಕಾರ ಮಾಡಲಾಗುವುದು ಎಂದರು.
ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಅದಕ್ಕೆ ಪೂರಕವಾದ ಉದ್ಯಮಗಳು ಬೆಳೆಯುತ್ತಾ ಹೋಗುತ್ತವೆ. ಉದ್ಯೋಗಗಳು ಸೃಷ್ಟಿಯಾಗುತ್ತದೆ. ಕೇರಳ ಹಾಗೂ ಗೋವಾಕ್ಕೆ ಸದ್ಯ ಸಿಆರ್‌ಝೆಡ್ ನಿಯಮಾವಳಿಗಳ ಸರಳೀಕರಣ ಇದೆ. ಆದರೆ, ಕರಾವಳಿಗೆ ಇರಲಿಲ್ಲ. ಈಗ ಹಂತಹಂತವಾಗಿ ನಿಯಮಗಳು ಸರಳೀಕರಣಗೊಳ್ಳುತ್ತಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳೋಣ ಎಂದು ಸಲಹೆ ನೀಡಿದರು.
ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ಗುಜರಾತ್‌ನಿಂದ ವಿಶಾಖಪಟ್ಟಂಣವರೆಗೂ ಇರುವ ಕಡಲತೀರಗಳ ಜಿಲ್ಲೆಗಳಲ್ಲಿ ಉಡುಪಿಗೆ ಉತ್ತಮ ಭವಿಷ್ಯ ಇದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಕಾಶ್ ಶೆಟ್ಟಿ ಮಾತನಾಡಿ, ಜಾಗತಿಕ ಪ್ರವಾಸೋದ್ಯಮಕ್ಕೆ ಹೋಲಿಸಿದರೆ ಉಡುಪಿ ಪ್ರವಾಸೋದ್ಯಮ ಶೇ 10ರಷ್ಟು ಮಾತ್ರ ಅಭಿವೃದ್ಧಿಯಾಗಿದ್ದು, ಸರ್ಕಾರ ಉದ್ಯಮ ವಲಯಕ್ಕೆ ಪ್ರೋತ್ಸಾಹ ಹಾಗೂ ಸಹಕಾರ ನೀಡಿದರೆ ಉಡುಪಿ ಅದ್ಭುತ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಉಳ್ಳಾಲದಿಂದ ಮರವಂತೆ ಬೀಚ್‌ವರೆಗೂ ದ್ವಿಪಥ ರಸ್ತೆ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಮೂಲಸೌಕರ್ಯ ಕಲ್ಪಿಸಿದರೆ ಜಿಲ್ಲೆಯಲ್ಲಿ ಬಂಡವಾಳ ಹೂಡಲು ಸಿದ್ಧ ಎಂದು ಘೋಷಿಸಿದರು.
ಶಾಸಕ ರಘುಪತಿ ಭಟ್ ಮಾತನಾಡಿ, ಗೋವಾ, ಕೇರಳ ರಾಜ್ಯಕ್ಕಿಂತ ಸುಂದರವಾದ ಕಡಲ ಕಿನಾರೆಗಳು, ಸಾಂಸ್ಕೃತಿಕ ಶ್ರೀಮಂತಿಕೆ, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ಉಡುಪಿಯಲ್ಲಿವೆ. ಕರಾವಳಿಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯವಾದರೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಸಿಆರ್‌ಝೆಡ್ ನಿಯಮಗಳು ಸರಳೀಕರಣಗೊಂಡರೆ ಪ್ರವಾಸೋದ್ಯಮ ಬೆಳೆಯಲಿದೆ ಎಂದು ಸಲಹೆ ನೀಡಿದರು.
ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್‌ಪಿ ನಿಶಾ ಜೇಮ್ಸ್, ಜಿಲ್ಲಾ ಪಂಚಾಯ್ತಿ ಸಿಇಒ ಪ್ರೀತಿ ಗೆಹ್ಲೋಟ್ ಇದ್ದರು