ಶಿವಮೊಗ್ಗ ಲೋಕಸಭಾ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಯಾಗಿ ಕೆ ಎಸ್ ಈಶ್ವರಪ್ಪ ನಾಮಪತ್ರ ಸಲ್ಲಿಕೆ

ಶಿವಮೊಗ್ಗ: ರಾಜ್ಯ ಬಿಜೆಪಿ ಬಿ ಎಸ್ ಯಡಿಯೂರಪ್ಪ ಕುಟುಂಬದ ಮುಷ್ಠಿಯಲ್ಲಿದೆ ಎಂದು ಆರೋಪಿಸಿ ಮತ್ತು ತಮ್ಮ ಪುತ್ರ ಕೆ ಇ ಕಾಂತೇಶ್ ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗಲಿಲ್ಲವೆಂದು ಮುನಿಸಿಕೊಂಡು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಇಂದು ಶುಕ್ರವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಜನ ಬೆಂಬಲದೊಂದಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡಿ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಈ ರೀತಿ ಬೃಹತ್ ಸಂಖ್ಯೆಯಲ್ಲಿ ನಮಗೆ ಬೆಂಬಲಕ್ಕೆ ನಿಂತ ಮತದಾರರಿಗೆ ಧನ್ಯವಾದಗಳು, ಇಂದು ಎಲ್ಲಾ ಜಾತಿ, ಧರ್ಮದ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ. ಅವರೆಲ್ಲರ ಆಸೆ ನಾನು ಗೆಲ್ಲಬೇಕೆಂದು ಆಗಿದೆ ಎಂದರು.

ಇದಕ್ಕೂ ಮುನ್ನ ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ನಗರದಲ್ಲಿರುವ ಕೋಟೆ ಮಾರಿಕಾಂಬ ದೇವಸ್ಥಾನಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸಿತು. ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಮಗ ಕಾಂತೇಶ್ ಗೆ ಟಿಕೆಟ್ ನೀಡದಿರುವ ಕಾರಣ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ಈಶ್ವರಪ್ಪ ಖುದ್ದು ತಾವೇ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಬಿವೈ ರಾಘವೇಂದ್ರ ಮತ್ತು ಕಾಂಗ್ರೆಸ್ ನ ಗೀತಾ ಶಿವರಾಜಕುಮಾರ್ ಈಶ್ವರಪ್ಪನವರ ಎದುರಾಳಿಯಾಗಿದ್ದಾರೆ.

ಒಂದು ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ, ಆದರೆ ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಅವರ ಮಗ ಬಿಜೆಪಿ ಅಧ್ಯಕ್ಷ ಮತ್ತು ಇನ್ನೊಬ್ಬರು ಸಂಸದರಾಗಿದ್ದಾರೆ. ಕುಟುಂಬ ರಾಜಕೀಯದ ವಿರುದ್ಧ ಸ್ಪರ್ಧಿಸುತ್ತಿದ್ದೇನೆ. ಎರಡನೆಯದಾಗಿ ಸಿ.ಟಿ.ರವಿ, ಅನಂತಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಎಲ್ಲ ‘ಹಿಂದುತ್ವವಾದಿ’ ನಾಯಕರನ್ನು ಹೊರಹಾಕಲಾಗಿದೆ. ‘ಹಿಂದುತ್ವವಾದಿ’ಗೆ ಸ್ಥಾನ ಸಿಗಲಿ ಎಂದು ಹೀಗೆ ಮಾಡುತ್ತಿದ್ದೇನೆ. ಕರ್ನಾಟಕದ ಕಾರ್ಯಕರ್ತರು ಬಿಜೆಪಿ ನಾಯಕರ ಮೇಲೆ ಕೋಪಗೊಂಡಿದ್ದಾರೆ ಎಂದು ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಈಶ್ವರಪ್ಪ ಹೇಳಿದರು.

Leave a Reply

Your email address will not be published. Required fields are marked *

error: Content is protected !!