ಹಿಂಬದಿ ಸವಾರನ ಸಾವಿಗೆ ದ್ವಿಚಕ್ರ ವಾಹನದ ಮಾಲಕ ಪರಿಹಾರ ಪಾವತಿಸ ಬೇಕು: ಹೈಕೋರ್ಟ್
ಬೆಂಗಳೂರು,: ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಹಿಂಬದಿ ಸವಾರ ಮೂರನೇ ವ್ಯಕ್ತಿ(ಥರ್ಡ್ ಪಾರ್ಟಿ) ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿ ರುವ ಹೈಕೋರ್ಟ್, ಬೈಕ್ನ ಹಿಂಬದಿ ಸವಾರನ ಸಾವಿಗೆ ಬೈಕ್ ಮಾಲಕನೇ ಪರಿಹಾರ ಪಾವತಿಸಬೇಕು ಎಂದು ಆದೇಶಿಸಿದೆ.
ಇದೇ ವೇಳೆ ತುಮಕೂರಿನ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ ಇನ್ಸ್ಯೂರೆನ್ಸ್ ಕಂಪೆನಿಗೆ ಪರಿಹಾರ ಪಾವತಿಸಲು ನೀಡಿದ್ದ ಆದೇಶ ವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಲ್ಲದೇ, ನ್ಯಾಯಮಂಡಳಿ ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಮೃತನ ಕುಟುಂಬಸ್ಥರಿಗೆ ನೀಡುವಂತೆ ವಾಹನದ(ಹೀರೋ ಹೋಂಡಾ ಬೈಕ್) ಮಾಲಕ ನಿಸಾಮುದ್ದೀನ್ ಅವರಿಗೆ ಹೈಕೋರ್ಟ್ ಆದೇಶಿಸಿದೆ.
2011ರ ಮಾ.24ರಂದು ಮೃತ ಸಿದ್ದಿಕ್ ಉಲ್ಲಾಖಾನ್ ಎಂಬುವವರು ಕುಣಿಗಲ್ ಬಳಿ ನಿಸಾಮುದ್ದೀನ್ ಅವರ ಬೈಕ್ನಲ್ಲಿ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡುತ್ತಿದ್ದರು.
ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂ ದಾಗಿ ಹೀರೋ ಹೋಂಡಾ ಬೈಕ್ ಹಳ್ಳಕ್ಕೆ ಬಿದ್ದಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡ ಖಾನ್ ಅವರನ್ನು ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಾರ್ಚ್ 26, 2011 ರಂದು ಖಾನ್ ಮೃತಪಟ್ಟಿದ್ದರು.
ನಂತರ ಖಾನ್ ಕುಟುಂಬ ಸದಸ್ಯರು ಪರಿಹಾರ ಕೋರಿ ಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ, ಖಾನ್ ಚಿಕಿತ್ಸೆ ಮತ್ತು ಇತರ ವೆಚ್ಚಗಳಿಗಾಗಿ 1.2 ಲಕ್ಷ ರೂ.ಖರ್ಚು ಮಾಡಿದ್ದು, ಒಟ್ಟು 15 ಲಕ್ಷ ರೂ.ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕುಣಿಗಲ್ನ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯ ಮಂಡಳಿ 2017ರ ಆ.24ರಂದು, ವಾರ್ಷಿಕ ಶೇ.6 ಬಡ್ಡಿಯೊಂದಿಗೆ 7,27,114 ರೂ.ಗಳನ್ನು ಪರಿಹಾರವಾಗಿ ನೀಡುವಂತೆ ವಿಮಾ ಸಂಸ್ಥೆಗೆ ಆದೇಶಿಸಿತ್ತು.
ಹೈಕೋರ್ಟ್ ತೀರ್ಪಿನಲ್ಲಿ ಏನಿದೆ?: ವಾಹನದ ಆಸನದ ಸಾಮಥ್ರ್ಯವು 1+1 ಆಗಿದ್ದು, ಅದರ ಆಧಾರದ ಮೇಲೆ ನ್ಯಾಯಮಂಡಳಿಯು ವಿಮಾ ಕಂಪೆನಿಯ ಮೇಲೆ ಪರಿಹಾರ ನೀಡುವ ಹೊಣೆಗಾರಿಕೆಯನ್ನು ನಿಗದಿಪಡಿಸಿದೆ, ನ್ಯಾಯಾಧಿಕರಣದ ಆದೇಶ ಸೂಕ್ತವಾಗಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಹಾಗೆಯೇ ಪರಿಹಾರ ಪಾವತಿಸುವ ಹೊಣೆಯನ್ನು ಬೈಕ್ ಮಾಲಕನಿಗೆ ವರ್ಗಾಯಿಸಿದೆ.