ತ್ರಿವಳಿ ತಲಾಖ್: ಕೇರಳದಲ್ಲಿ ಮೊದಲ ಬಂಧನ
ತಿರುವನಂತಪುರ: ತ್ರಿವಳಿ ತಲಾಖ್ ಮಸೂದೆ ಸಂಸತ್ ನಲ್ಲಿ ಪಾಸ್ ಆದ ಬಳಿಕ ಇದೇ ಮೊದಲ ಬಾರಿಗೆ ಈ ಕಾನೂನಿನ ಅಡಿಯಲ್ಲಿ ಕೇರಳದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯನ್ನು ಕೇರಳ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಕೇರಳದ ಕಲ್ಲಿಕೋಟೆಯ ಮುಕ್ಕೊಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪತ್ನಿಗೆ ತಲಾಖ್ ನೀಡಿದ್ದ ಇಕೆ ಹುಸಾಂ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಇಕೆ ಹುಸಾಂ ಆಗಸ್ಟ್ 1ರಂದು ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದರು. ಈ ಸಂಬಂಧ ಹುಸಾಂ ಪತ್ನಿಯ ಕುಟುಂಬದವರು ದೂರು ನೀಡಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಸತ್ತಿನ ಉಭಯ ಸದನಗಳಲ್ಲಿ ತ್ರಿವಳಿ ತಲಾಖ್ ನಿಷೇಧಿಸುವ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳು) ಮಸೂದೆ–2019 ಅಂಗೀಕಾರವಾದ ಬಳಿಕ ದಕ್ಷಿಣ ಭಾರತದಲ್ಲಿ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದೆ. ತ್ರಿವಳಿ ತಲಾಖ್ ನಿಷೇಧಿಸುವ ಮತ್ತು ತ್ರಿವಳಿ ತಲಾಖ್ ನೀಡುವ ಪುರುಷನಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡುವ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳು) ಮಸೂದೆ ಅನ್ವಯ ತ್ರಿವಳಿ ತಲಾಖ್ ನೀಡಿರುವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.