ಪ್ರವಾಸಿಗರ ಸುರಕ್ಷತೆಗಾಗಿ ಸಿದ್ಧವಾಗಿದೆ ಪ್ರವಾಸಿ ಮಿತ್ರ ತಂಡ
ಉಡುಪಿ: ಮಳೆಗಾಲದಲ್ಲಿ ಕಡಲಿಗಿಳಿಯುವುದು, ಈಜಾಡುವುದು ಅಪಾಯಕಾರಿ. ಕಡಲು ಉಕ್ಕೇರುತಿದ್ದು, ತೀರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ಕಡಲತೀರಗಳಲ್ಲಿ ಹೆಚ್ಚುವರಿ ಹೋಂಗಾರ್ಡ್-ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ. ಎಷ್ಟೇ, ಸಲಹೆ ಸೂಚನೆ ನೀಡಿದರು ಕಡಲತೀರಕ್ಕೆ ಬರುವ ಪ್ರವಾಸಿಗರು ಅಪಾಯ ಲೆಕ್ಕಿಸದೆ ಹೋಮ್ಗಾರ್ಡ್ಗಳ ಕಣ್ಣು ತಪ್ಪಿಸಿ ಕಡಲಿಗಿಳಿದು ಮೋಜು ಮಸ್ತಿ ಮಾಡುತ್ತಾರೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಪ್ರವಾಸಿ ಮಿತ್ರರರನ್ನು ನಿಯೋಜಿಸಲಾಗಿದೆ ಎಂದು ಗೃಹರಕ್ಷಕದಳದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಸಿಗರ ಸುರಕ್ಷತೆ ನಮಗೆ ಮುಖ್ಯವಾಗಿದೆ. ಸಲಹೆ, ಸೂಚನೆ ಮೀರಿ ಪ್ರವಾಸಿಗರು ಸಮುದ್ರಕ್ಕಿಳಿದು ಪ್ರಾಣಕ್ಕೆ ಅಪಾಯ ತಂದುಕೊಂಡ ಘಟನೆಗಳು ಸಾಕಷ್ಟು ನಡೆದಿವೆ. ಮಳೆಗಾಲದಲ್ಲಿ ಸಮುದ್ರಕ್ಕೆ ಇಳಿಯದಂತೆ ಪದೇ ಪದೇ ಸೂಚನೆಯನ್ನು ನೀಡಲಾಗುತ್ತದೆ. ಪ್ರವಾಸಿಗರು ಇದಕ್ಕೆ ಸ್ಪಂದಿಸಿ ಲೈಫ್ಗಾರ್ಡ್, ಹೋಂಗಾರ್ಡ್ಗಳೊಂದಿಗೆ ಸಹಕರಿಸಬೇಕೆಂದು ಡಾ. ಪ್ರಶಾಂತ್ ಶೆಟ್ಟಿ, ಜಿಲ್ಲಾ ಕಮಾಂಡೆಂಟ್, ಉಡುಪಿ, ಗೃಹ ರಕ್ಷಕದಳ ತಿಳಿಸಿದ್ದಾರೆ
ಮಳೆಗಾಲದ ಅವಧಿಯಲ್ಲಿ ಸಮುದ್ರ ಅಲೆಗಳು ಅಪಾಯಕಾರಿಯಾಗಿರುತ್ತದೆ. ಸುರಕ್ಷತಾ ದೃಷ್ಟಿಯಿಂದ ಲೈಫ್ಗಾರ್ಡ್, ಹೋಂಗಾರ್ಡ್, ಪೊಲೀಸ್ ನೀಡುವ ಸೂಚನೆಗಳನ್ನು ಪ್ರವಾಸಿಗರು ಪಾಲಿಸಬೇಕು ಎಂದು ಉಡುಪಿ ಎಸ್ಪಿ ನಿಶಾ ಜೇಮ್ ಹೇಳಿದ್ದಾರೆ.
ಜಿಲ್ಲೆಯ ಬೀಚ್ಗಳಲ್ಲಿ ಈಗಾಗಲೇ 10 ಮಂದಿ ಹೋಂಗಾರ್ಡ್ರನ್ನು ನಿಯೋಜಿಸಲಾಗಿತ್ತು. ಪಸ್ತುತ ಮಳೆಗಾಲ ಅವಧಿಯಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಕ್ಕಾಗಿ 10 ಮಂದಿ ಹೆಚ್ಚುವರಿ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ. ಪಡುಬಿದ್ರಿ-4, ಮರವಂತೆ -4, ಮಲ್ಪೆ ಬೀಚ್-7, ಕಾಪು-4, ಶಿರೂರಿನಲ್ಲಿ ಒಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಬೆಳಗ್ಗೆ 10ರಿಂದ ರಾತ್ರಿ 7ಗಂಟೆಯ ಪ್ರವಾಸಿ ಮಿತ್ರರು ಕರ್ತವ್ಯದಲ್ಲಿರುತ್ತಾರೆ. ಪ್ರವಾಸಿಗರನ್ನು ನೀರಿಗೆ ಇಳಿಯದಂತೆ ಸಲಹೆ, ಸೂಚನೆ ಕೊಡುತ್ತಾರೆ. ಅಲ್ಲದೇ ಜತೆಯಲ್ಲಿ ಸ್ಥಳೀಯ ಜೀವರಕ್ಷಕರು ಕಾರ್ಯಾನಿರ್ವಹಿಸುತ್ತಾರೆ. ಎಚ್ಚರಿಸುವ ಜತೆಗೆ ಅಪಾಯದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡುತ್ತಾರೆ.
ಸೆಲ್ಫಿ ಕ್ರೇಜ್ನಿಂದ ಜೀವಕ್ಕೆ ಸಂಚಕಾರ
ಇತ್ತೀಚಿನ ದಿನಗಳಲ್ಲಿಪ್ರವಾಸಿ ತಾಣಗಳಲ್ಲಿ ಸೆಲ್ಫಿ ಕ್ರೇಜ್ ಜೋರಾಗಿದ್ದುದರಿಂದ ಸಾಕಷ್ಟು ಅವಘಡಗಳು ಸಂಭವಿಸಿದೆ. ಹೊರ ಜಿಲ್ಲೆಯ ದೂರದ ಊರಿನವರು ಬೋರ್ಗರೆಯುವ ಅಪಾಯಕಾರಿ ಅಲೆಗಳ ಜತೆ ಸೆಲ್ಪಿ ತೆಗೆಯಲು ಹೋಗಿ,ಜೀವ ಕಳೆದುಕೊಳ್ಳುತ್ತಾರೆ. ನೀರಿನ ಆಳಕ್ಕೆ ಇಳಿದು ಸೆಲ್ಫಿ ತೆಗೆದುಕೊಳ್ಳುವುದು ಅಪಾಯಕಾರಿ. ಆದರಿಂದ ದೂರದಲ್ಲೇ ನಿಂತು ಅಲೆಗಳ ಸೌಂದರ್ಯವನ್ನು ಸವಿಯುವುದು ಒಳ್ಳೆಯದು.
ಮುನ್ನೆಚ್ಚರಿಕೆ ದೃಷ್ಟಿಯಿಂದ 1. ಕಿ.ಮೀ ಬೇಲಿ ಅಳವಡಿಕೆ
ಕಡಲಿಗೆ ಇಳಿಯುವ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಮತ್ತು ಅಪಾಯದ ಸಾಧ್ಯತೆ ಹಿನ್ನೆಲೆಯಲ್ಲಿ ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯ ವತಿಯಿಂದ ಬೀಚ್ ಸುತ್ತ ಒಂದು ಕಿ. ಮೀ. ದೂರದವರೆಗೆ ತಡೆಬೇಲಿ ಹಾಕಲಾಗಿದೆ. ಅಪಾಯಕಾರಿ ಸೂಚನೆ ನೀಡಲು ಕೆಂಪು ಬಾವುಟವನ್ನು ಉದ್ದಕ್ಕೆ ಸಿಲುಕಿಸಲಾಗಿದೆ. ಆದರೂ ಹೊರಜಿಲ್ಲೆಯ ಪ್ರವಾಸಿಗರು ಮಲ್ಪೆ ಬೀಚ್ನಲ್ಲಿ ನಿಯಮ ಉಲ್ಲಂಘಿಸಿ ಸಮುದ್ರಕ್ಕಿಳಿದು ಆಟವಾಡುತ್ತಾರೆ.ಈ ಸಮಯದಲ್ಲಿ ಸಾಂಪ್ರದಾಯಿಕ ಮೀನುಗಾರರನ್ನು ಹೊರತುಪಡಿಸಿ ಇತರ ಯಾವುದೇ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯುವುದು ಸಂಪೂರ್ಣ ನಿಬಂಧವಿದೆ.