ಆಧುನಿಕ ಮಾಧ್ಯಮಗಳ ಮೂಲಕ ಸಂಸ್ಕೃತ ಇಡೀ ಸಮಾಜಕ್ಕೆ ಪಸರಿಸುವಂತಾಗಲಿ

ಉಡುಪಿ: ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಸಂಬಂಧಿಸಿದ ವಿಷಯಗಳನ್ನು ಸಂಸ್ಕೃತ
ಭಾಷೆಯಲ್ಲಿ ನೀಡಿದಲ್ಲಿ ವಿದ್ಯಾರ್ಥಿಗಳಲ್ಲಿ ಸಂಸ್ಕೃತದ ಬಗ್ಗೆ ಒಲವು ಮೂಡಿಸಲು ಸಾಧ್ಯ
ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು.
ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ಮಂಗಳೂರು
ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಕ ಸಂಘದ ಸಹಯೋಗದಲ್ಲಿ ಕಾಲೇಜಿನ ಮಿನಿ
ಆಡಿಟೋರಿಯಂನಲ್ಲಿ ಮಂಗಳವಾರ ನಡೆದ ಪ್ರಥಮ ಸೆಮಿಸ್ಟರ್‌ ಪದವಿ ತರಗತಿಗಳ ನೂತನ ಪಠ್ಯಪುಸಕ್ತಗಳ ಅನಾವರಣ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಸಂಸ್ಕೃತ ಶಿಕ್ಷಣ ಆಧ್ಯಾತ್ಮಿಕ ವಿಷಯಗಳನ್ನು ಕೇಂದ್ರೀಕರಿಸಿಕೊಂಡು
ವ್ಯವಹಾರಿಕ ಹಾಗೂ ಬೌದ್ಧಿಕ ಜ್ಞಾನದ ವೃದ್ಧಿಗೆ ಬೇಕಾದ ಎಲ್ಲ ವಿಷಯಗಳನ್ನು
ಒಳಗೊಂಡಿತ್ತು. ಆದರೆ ಇಂದಿನ ಶಿಕ್ಷಣ ಕೇವಲ ಅಂಕ ಗಳಿಕೆಗೆ ಸೀಮಿತವಾಗಿದ್ದು, ಸಂಪಾದನೆಮಾಡುವುದನ್ನು ಮಾತ್ರ ತಿಳಿಸಿಕೊಡುತ್ತಿದೆ. ನಾವು ಸಂಪಾದಿಸುವ ಹಣವನ್ನು ಯಾವ ರೀತಿ ಉಪಯೋಗ ಮಾಡಬೇಕೆಂಬುವುದನ್ನು ಕಲಿಸುತ್ತಿಲ್ಲ. ನಾವು ಗಳಿಸುವ ಸಂಪತ್ತು ಸರಿಯಾದ ರೀತಿಯಲ್ಲಿ ಸದ್ವಿನಿಯೋಗ ಆಗದಿದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಅಸಾಧ್ಯ ಎಂದರು.

ಭಗವದ್ಗೀತೆ, ವೇದ–ಉಪನಿಷತ್ತು, ರಾಮಾಯಣ, ಮಹಾಭಾರತ ಈ ಮೊದಲಾದ ಮಹಾಗ್ರಂಥಗಳ ಸಾರ ಬದುಕಿಗೆ ಪೂರಕವಾಗಿದೆ. ಹಾಗಾಗಿ ಶಾಲಾ–ಕಾಲೇಜುಗಳಲ್ಲಿ ಇಂತಹ ಪ್ರಾಚೀನ ಗ್ರಂಥಗಳ ಅಧ್ಯಯನ ಆಗಬೇಕು. ಸಂಸ್ಕೃತ ನಮ್ಮ ಮುಂದಿನ ಪೀಳಿಗೆಗೆ ಸಹಜವಾಗಿ ಸಿಗುವಂತಾಗಬೇಕು ಎಂದು ಹೇಳಿದರು.

ಆದಿಚುಂಚನಗಿರಿ  ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಡಾ. ಮಧುಸೂಧನ ಅಡಿಗ ಮಾತನಾಡಿ,ಸಂಸ್ಕೃತ ದೇವ ಭಾಷೆ. ಅದನ್ನು ವ್ಯವಹಾರಕ್ಕೆ ಬಳಸಲು ಸಾಧ್ಯವಿಲ್ಲ. ಹಾಗಾಗಿ ಭಾಷೆಯಲ್ಲಿ ಬದಲಾವಣೆ ತರಬೇಕೆಂಬ ವಾದವೂ ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕೆಎಸ್‌ಎಸ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.
ಮಂಜುನಾಥ ಎನ್‌. ಭಟ್‌, ಕಟೀಲು ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ
ಡಾ. ಭಾಸ್ಕರ್‌ ಭಟ್‌, ಬಂಟ್ವಾಳ ಎಸ್‌ವಿಎಸ್‌ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.
ರಮಾನಂದ, ಮಂಗಳೂರು ಮ್ಯಾಪ್ಸ್‌ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಡಾ. ಸುರೇಖಾ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ವಿವಿಯ ಸಂಸ್ಕೃತ ಶಿಕ್ಷಕರ ಸಂಘದ ಕಾರ್ಯದಶಿ ಡಾ. ಮಂಜುನಾಥ ಎಸ್‌. ಭಟ್‌,ಕಾಲೇಜಿನ ಪ್ರಾಂಶುಪಾಲ ಡಾ. ಎ. ರಾಘವೇಂದ್ರ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಡಾ.ಟಿ.ಎಸ್‌. ರಮೇಶ್‌ ಸ್ವಾಗತಿಸಿದರು. ಆನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!