ವಿವಾದಕ್ಕೆ ಕಾರಣವಾಯ್ತು ಉಡುಪಿಯ ಈ ಮದುವೆ
ಉಡುಪಿ: ಹಿಂದೆಲ್ಲಾ ಮದುವೆ ಮಂಟಪಕ್ಕೆ ವಧು- ವರರು ಮಾಮೂಲಿಯಾಗಿ ದಿಬ್ಬಣ ಮೂಲಕ ಬರುವ ಸಂಪ್ರದಾಯ ಇತ್ತು. ಆದರೆ ಈಗ ಮದುವೆಗಳೆಲ್ಲಾ ಸಿಕ್ಕಾಪಟ್ಟೆ ವಿಭಿನ್ನ ವಾಗಿ ಆಗಬೇಕನ್ನುವ ಅಭಿಲಾಷೆ ಮದುಮಕ್ಕಳಲ್ಲಿ ಬಂದಿದೆ. ಹಾಗಾಗಿ ಈಗ ಎಲ್ಲವೂ ಫಿಲ್ಮೀ ಸ್ಟೈಲಲ್ಲಿ ನಡೆಯುತ್ತದೆ. ಗುರುವಾರ ಉಡುಪಿಯ ಕಿದಿಯೂರು ಹೋಟೆಲ್ನಲ್ಲಿ ನಡೆದ ಮದುವೆಯಲ್ಲಿ ಯಕ್ಷಗಾನ ವೇಷಧಾರಿಗಳೊಂದಿಗೆ ಮದುವೆ ಮನೆಗೆ ವಧ- ವರ ಆಗಮನವಾಗಿದೆ. ಮದುವೆಗೆ ವಧು ವೇಷಧಾರಿಗಳೊಂದಿಗೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ.
ಉಡುಪಿ ಶೇಷ ಶಯನ ಹಾಲ್ ನ ಮುಂಭಾಗದಲ್ಲಿ ಫೋಟೋಗ್ರಾಫರ್ಸ್ ಶೂಟಿಂಗ್ ಮಾಡುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಬಡಗು ತಿಟ್ಟು ವೇಷಧಾರಿಗಳ ಜೊತೆ ವಧು ಕುಣಿದರೆ, ವರ ನಾಚಿಕೊಂಡು ವಾಕ್ ಮಾಡಿದ್ದಾನೆ. ಚೆಂಡೆಯ ನಾದಕ್ಕೆ ತಕ್ಕಂತೆ ಶಾಸ್ತ್ರೀಯ ಯಕ್ಷಗಾನದ ಸ್ಟೆಪ್ ಹಾಕಿದ ವಧು ವೇಷಧಾರಿಗಳು ನಾಚುವಂತೆ ಕುಣಿದಿದ್ದಾರೆ.
ಮದುವೆ ದಿಬ್ಬಣ ಸಂದರ್ಭ ಪಲ್ಲಕ್ಕಿ ಮೇಲೆ ಡಾನ್ಸ್ ಗ್ರೂಪ್ ನ ನಡುವೆ ಬರುವ ಟ್ರೆಂಡ್ ಶುರುವಾಗಿದೆ. ಆದರೆ ಯಕ್ಷಗಾನ ವೇಷಧಾರಿಗಳ ಜೊತೆ ಮದುವೆ ದಿಬ್ಬಣ ಬಂದಿರೋದು ಇದೇ ಮೊದಲು. ಕರಾವಳಿಯ ಗಂಡುಕಲೆಯನ್ನು ಈ ರೀತಿ ಬಳಸಿದ್ದಕ್ಕೆ ಕೆಲ ಯಕ್ಷಪ್ರೇಮಿಗಳು ಮೂಗು ಮುರಿದಿದ್ದಾರೆ.
ಐದಾರು ತಿಂಗಳ ಹಿಂದೆ ಕುಕ್ಕಿಕಟ್ಟೆಯ ಮುಚ್ಲುಕೊಡು ದೇವಸ್ಥಾನದಲ್ಲಿ ಬ್ರಾಹ್ಮಣ ಕುಟುಂಬದ ಮದುವೆ ಸಂದರ್ಭದಲ್ಲಿ ವಧುವನ್ನು ಪಲ್ಲಕಿಯಲ್ಲಿ ಕರೆದುಕೊಂಡು ಮಂಟಪಕ್ಕೆ ಬರುವಾಗ ನಡುರಸ್ತೆಯಲ್ಲೆ ವಧು ಪಲ್ಲಯಿಂದ ಬಿದ್ದು ಗಾಯಗೊಂಡು ಹಸೆಮಣೆ ಎರಿದ ಘಟನೆಯೂ ನಡೆದಿತ್ತು.