ಬರಗಾಲ ಎದುರಿಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ಕೋಟ ಶ್ರೀನಿವಾಸ ಪೂಜಾರಿ ಟೀಕೆ

ಉಡುಪಿ: ಬರಗಾಲ ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿಲ್ಲ. ನೀತಿ ಸಂಹಿತೆ ನೆಪವೊಡ್ಡಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಶಾಲೆಗಳ ನಿರ್ಮಾಣ, ಮೇವು ಬ್ಯಾಂಕ್ ಮಾಡುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇಂತಹ ಕೆಟ್ಟ ಆಡಳಿತವನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಏಳೆಂಟು ತಿಂಗಳು ಕಳೆದರೂ ಜನಪ್ರತಿನಿಧಿಗಳ ಕೈಗೆ ಅಧಿಕಾರ ಸಿಕ್ಕಿಲ್ಲ. ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಹಾಕಿರುವ ಪರಿಣಾಮ ಸ್ಥಳೀಯ ಆಡಳಿತ ರಚನೆಯಾಗಿಲ್ಲ.

ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್‌ಗಳಲ್ಲಿ ಬರ ಪರಿಹಾರ ಹಾಗೂ ನೆರೆ ಪರಿಹಾರ ಸಭೆಗಳು ನಡೆಯುತ್ತಿಲ್ಲ. ಬರ ಕಾಮಗಾರಿಗೆ ನೀತಿ ಸಂಹಿತೆಯಿಂದ ವಿನಾಯಿತಿ ಇದ್ದರೂ ಸರ್ಕಾರ ಸತ್ತಂತೆ ವರ್ತಿಸುತ್ತಿದೆ ಎಂದು ಹರಿಹಾಯ್ದರು.

ಉಡುಪಿಯಲ್ಲಿ ಮರಳು ತೆಗೆಯಲು ಇದ್ದ ಅಡ್ಡಿಗಳನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಿವಾರಿಸಿದೆ. ಆದರೆ, 7 ಸದಸ್ಯರ ಸಮಿತಿ ಸಭೆ ಕರೆದು ಮರಳು ಪರವಾನಗಿ ನೀಡಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ. ಮತ್ತೊಂದೆಡೆ, ಪೊಲೀಸ್ ಇಲಾಕೆ ಸಣ್ಣ ವಾಹನಗಳಲ್ಲಿ ಮರಳು ಸಾಗಿಸುವ ಬಡವರನ್ನು ಬಂಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾದರ್ ಐವನ್ ಹೇಳಿಕೆಗೆ ಆಕ್ಷೇಪ: ನೀತಿ ಸಂಹಿತೆ ಮೀರಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಗುತ್ತಿಗೆದಾರರು ಚುನಾವಣಾ ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ಯಡಿಯೂರಪ್ಪ ಈಚೆಗೆ ಆಯೋಗಕ್ಕೆ ಪತ್ರ ಬರೆದಿದ್ದರು. ಆದರೆ, ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ನೀಡಬಾರದು ಎಂದು ಬಿಎಸ್‌ವೈ ಪತ್ರ ಬರೆದಿರುವುದಾಗಿ ಸಚಿವ ಖಾದರ್ ಹಾಗೂ ಐವನ್ ಡಿಸೋಜ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಆರೋಪಿಸಿದರು

ಆರ್‌ಟಿಇ ನಿಯಮ ಬದಲಾವಣೆಗೆ ಖಂಡನೆ: ಹಿಂದೆ ಆರ್‌ಟಿಇ ಅಡಿ 1.20 ಲಕ್ಷ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಪಡೆದುಕೊಂಡಿದ್ದರು. ಸರ್ಕಾರದ ಹೊಸ ನಿಯಮದ ಪ್ರಕಾರ ಬಡವರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲದಂತಾಗಿದೆ. ಸರ್ಕಾರ ಖಾಸಗಿ ಶಾಲೆಗಳ ಮಾಲೀಕರ ಪರವಾಗಿ ನಿಂತಿದೆ ಎಂದು ಆರೋಪಿಸಿದರು.

ಆರ್‌ಟಿಇ ಅಡಿ ಕಳೆದ ವರ್ಷ ಶೇ 90ರಷ್ಟು ಸೀಟುಗಳು ಭರ್ತಿಯಾಗಿದ್ದವು. ಈ ವರ್ಷ ಶೇ 10ರಷ್ಟು ಸೀಟುಗಳು ಭರ್ತಿಯಾಗಿಲ್ಲ. ಸರ್ಕಾರದ ನೀತಿಗಳು ಬಡವರ ವಿರುದ್ಧವಾಗಿದೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!