ಆನೆಕೆರೆ-ವರಂಗ ಬಸದಿ ಕೆರೆ ಪ್ರವಾಸೋದ್ಯಮವಾಗಿ ಅಭಿವೃದ್ಧಿಪಡಿಸಲು ಚಿಂತನೆ
ಕಾರ್ಕಳ:ನಗರದ ಮಧ್ಯ ಭಾಗದಲ್ಲಿರುವ ಆನೆಕೆರೆಯನ್ನು ಒಂದು ಆಕರ್ಷಣೀಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿ ಕಾರ್ಕಳ ನಗರವನ್ನು ಪ್ರವಾಸೋಧ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಚಿಂತನೆಯಿದ್ದು, ಈ ನಿಟ್ಟಿನಲ್ಲಿ ಶಾಸಕರಾದ ವಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ನಿವೃತ್ತ ಮುಖ್ಯ ಅಭಿಯಂತರ ಸತೀಶ್, ಬೆಂಗಳೂರು ಮಹಾನಗರ ಪಾಲಿಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ರಾವ್, ಶ್ರೀಹೆಗಡೆ ಹಾಗೂ ಸಮಾಲೋಚಕರಾದ ಯೂನಸ್‌ರವರ ನಿಯೋಗದಿಂದ ಆನೆಕೆರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಯಿತು.
ಆನೆಕೆರೆಯಲ್ಲಿ ತುಂಬಿರುವ ಹೂಳೆತ್ತುವುದು, ಕೆರೆಯಲ್ಲಿ ಬೆಳೆದಿರುವ ಕಳೆಯನ್ನು ತೆಗೆಯುವುದು ಹಾಗೂ ಕೆರೆಯ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು. ಬೆಂಗಳೂರು ನಗರದಲ್ಲಿ ಕೆಲವೊಂದು ಕೆರೆಗಳನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ್ದು ಅದೇ ರೀತಿ ಅನೆಕೆರೆಯನ್ನು ಅಭಿವೃದ್ದಿ ಪಡಿಸುವ ಚಿಂತನೆಯನ್ನು ಮಾನ್ಯ ಶಾಸಕರಾದ ವಿ. ಸುನಿಲ್ ಕುಮಾರ್‌ರವರು ಹೊಂದಿದ್ದು ಕಾರ್ಯ ಪ್ರವೃತ್ತರಾಗಿರುತ್ತಾರೆ.
ಅಷ್ಟೇ ಅಲ್ಲದೆ ವರಂಗ ಗ್ರಾಮದ ವರಂಗ ಬಸದಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು. ಸದ್ರಿ ಕೆರೆಯನ್ನು ಕೂಡ ಪ್ರವಾಸೋದ್ಯಮ ನಿಟ್ಟಿನಲ್ಲಿ ಯಾವ ತರಹ ಅಭಿವೃದ್ಧಿ ಪಡಿಸಬಹುದು ಎಂದು ಸಮಾಲೋಚನೆ ನಡೆಸಲಾಯಿತು. ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿರುವ ಈ ಎರಡು ಕೆರೆಗಳನ್ನು ಹೇಗೆ ಅಭಿವೃದ್ಧಿ ಪಡಿಸಬಹುದೆಂಬ ಶಾಸಕರು ತನ್ನ ಕಲ್ಪನೆಯನ್ನು ಈ ಸಂದರ್ಭದಲ್ಲಿ ನಿಯೋಗದೊಂದಿಗೆ ಹಂಚಿಕೊಂಡರು. ಈ ನಿಯೋಗದೊಂದಿಗೆ ಸ್ಥಳೀಯರಾದ ನಿರಂಜನ್ ಜೈನ್, ಮಹಾವೀರ ಹೆಗ್ಡೆ, ಅಕ್ಷಯ್ ಕುಮಾರ್, ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.