ಇಂಗ್ಲಿಷ್ ಮಾಧ್ಯಮದ ಬದಲು ಭಾಷೆಯಾಗಿ ಕಲಿಸುವ ಚಿಂತನೆ: ಸುರೇಶ್ ಕುಮಾರ್
ಉಡುಪಿ: ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಮಾಧ್ಯಮದ ಬದಲು ಅಲ್ಲ, ಭಾಷೆಯಾಗಿ ಕಲಿಸುವ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮಕ್ಕಳ ಸಂಖ್ಯೆಯನ್ನು ಸರಿದೂಗಿಸುವ ನಿಟ್ಟಿನಿಂದ ರಾಜ್ಯದಾದ್ಯಂತ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಿದ್ದೇವೆ. ಆದರೆ ಇತ್ತೀಚೆಗೆ ಕೆಲವು ಕನ್ನಡ ಪರ ಚಿಂತಕರು ಸಿಎಂ ಅವರನ್ನು ಭೇಟಿ ಮಾಡಿ, ಇಂಗ್ಲಿಷ್ ಮಾಧ್ಯಮ
ಶಾಲೆಗಳನ್ನು ಮುಚ್ಚಿ, ಕನ್ನಡ ಮಾಧ್ಯಮವನ್ನೇ ಮುಂದುವರಿಸಿಕೊಂಡು ಹೋಗಬೇಕೆಂದು ತಾಕೀತು ಮಾಡಿದ್ದಾರೆ ಎಂದರು.
ಕನ್ನಡ ಶಾಲೆಗಳನ್ನು ಮುಂದುವರಿಸಿದರೆ, ಹಾಜರಾತಿಯ ಕೊರತೆ ಎದುರಾಗುತ್ತದೆ. ಇಂಗ್ಲಿಷ್ ಮಾಧ್ಯಮ ಆರಂಭಿಸಿದರೆ ವಿವಾದ ಆಗುವ ಆತಂಕ ಇದೆ. ಇನ್ನೊಂದು ಕಡೆ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಆಯಾ ರಾಜ್ಯಗಳ ಮಾತೃ ಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕೆಂದು ಹೇಳುತ್ತಿದೆ. ಹಾಗಾಗಿ ಸರ್ಕಾರ ದ್ವಂದ್ವ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ ಎಂದರು. ಮತ್ತೆ ಒಂದು ಸಾವಿರ ಇಂಗ್ಲಿಷ್ ಶಾಲೆಗಳನ್ನು ಆರಂಭಿಸುವ ಉದ್ದೇಶ ಇದೆ. ಆದರೆ ಅದನ್ನು ಯಾವ ರೀತಿ ಮಾಡಬೇಕೆಂಬುವುದನ್ನು ಯೋಚಿಸುತ್ತಿದ್ದೇವೆ. ಯಾಕೆಂದರೆ ಅನುಷ್ಠಾನದ ವೇಳ ಸ್ವಲ್ಪ ಹೆಚ್ಚುಕಮ್ಮಿಯಾದರೂ ಮೊದಲು ಆರಂಭಿಸಿರುವ ಒಂದು ಸಾವಿರ ಇಂಗ್ಲಿಷ್ ಶಾಲೆಗಳು ಮುಚ್ಚುವ ಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಇಂಗ್ಲಿಷ್ ಇಲ್ಲ ಎಂಬ ಕಾರಣಕ್ಕೆ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಅದಕ್ಕೆ ಬೇರೆ ಬೇರೆ ಕಾರಣವಿದೆ. ಆದ್ದರಿಂದ ಶಾಲೆಯ ಎಸ್‌ಡಿಎಂಸಿ, ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಈ ಹಿಂದಿನ ಸರ್ಕಾರ, ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡುತ್ತೇವೆಂಬ ಕಾಯ್ದೆಯನ್ನು ಜಾರಿಗೊಳಿಸಿತ್ತು. ಆದರೆ ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಮಕ್ಕಳಿಗೆ ಯಾವ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬುವುದು ಪೋಷಕರ ಇಚ್ಛೆ. ಸರ್ಕಾರಕ್ಕೆ ಅದನ್ನು ನಿರ್ಧರಿಸುವ ಅಧಿಕಾರ ಇಲ್ಲ ಎಂದು ಹೇಳಿತ್ತು ಎಂದು ತಿಳಿಸಿದರು. ನಮ್ಮ ರಾಜ್ಯದಲ್ಲಿ ಏಕರೂಪ ಶಿಕ್ಷಣ ಪದ್ದತಿ ಯಾಕಿಲ್ಲ. ಸಿಬಿಎಸ್‌ಇ, ಐಸಿಬಿಎಸ್‌ಇ,
ರಾಜ್ಯ ಪಠ್ಯಕ್ರಮ ಇದೆಲ್ಲ ಯಾಕೆ ಎಂಬ ಪ್ರಶ್ನೆ ಇದೆ. ಇದು ನಿಜವೂ ಆಗಿದೆ. ಒಂದು ಶಾಲೆ ಒಂದು ವರ್ಗವಾಗುತ್ತಿದೆ. ನಮ್ಮ ಶಿಕ್ಷಣ ಪದ್ಧತಿ ಆಧುನಿಕ ವರ್ಣಾಶ್ರಮ ಆಗುತ್ತಿದೆ.
ಏಕರೂಪ ಶಿಕ್ಷಣ ಜಾರಿಗೊಳಿಸಬೇಕೆಂಬುದು ಎಲ್ಲರ ಅಭಿಪ್ರಾಯ ಕೂಡ ಆಗಿದೆ. ಆದರೆ ತರುವ ಬಗ್ಗೆ ಬಹಳಷ್ಟು ವಿಚಾರ ಬೇಧವಿದೆ ಎಂದು ಅಭಿಪ್ರಾಯಪಟ್ಟರು. ಪಕ್ಕೆಲುಬು ವಿವಾದಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಮಕ್ಕಳ ವಿಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಅಪರಾಧ. ಹಾಗಾಗಿ ಶಾಲಾ ಸಮಯದಲ್ಲಿ ಶಿಕ್ಷಕರಿಗೆ ಮೊಬೈಲ್ ಬಳಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸುವ ಚಿಂತನೆ ಇದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವುದರಿಂದ ಅಂಗನವಾಡಿ ಕೇಂದ್ರಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅಂಗನವಾಡಿ ನೌಕರರ ಕೆಲಸ ಪೌಷ್ಠಿಕಾಂಶದ ಆಹಾರ ಕೊಡುವುದಾದರೆ, ಎಲ್‌ಕೆಜಿ ಯುಕೆಜಿ ಕೆಲಸ ಶಿಕ್ಷಣ ನೀಡುವುದಾಗಿದೆ ಎಂದು ಸಚಿವರು ಹೇಳಿದರು.
ಅಂಗನವಾಡಿ ನೌಕರರಿಗೆ ಮಕ್ಕಳಿಗೆ ಶಿಕ್ಷಣ ನೀಡುವುದು ಬಿಟ್ಟು ನೂರೆಂಟು ಕೆಲಸಗಳನ್ನು ಕೊಡಲಾಗುತ್ತದೆ. ಹಾಗಾಗಿ ಅವರ ಕೆಲಸಕ್ಕೆ ಯಾವುದೇ ತೊಂದರೆ ಆಗಲ್ಲ. ನಾವು ಎಲ್‌ಕೆಜಿ ಯುಕೆಜಿ ಆರಂಭಿಸದಿದ್ದರೆ ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರುವುದಿಲ್ಲ. ಇದು ನಮಗೆ ಒಂದು ಮಕ್ಕಳನ್ನು ಆಕರ್ಷಿಸುವ ಏರಿಯಾ ಕೂಡ ಆಗುತ್ತದೆ ಎಂದು ತಿಳಿಸಿದರು.
ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಮುಖಂಡರಾದ ಪ್ರಭಾಕರ ಪೂಜಾರಿ, ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಸಂಧ್ಯಾ ರಮೇಶ್ ಉಪಸ್ಥಿತರಿದ್ದರು